– ರಕ್ಷಣೆ ಕೋರಿದ ವಿಡಿಯೋ ವೈರಲ್
– ಭಾರತದ ರಾಯಭಾರಿಯಿಂದ ಮಹಿಳೆಯ ರಕ್ಷಣೆ
ದುಬೈ: ಯುಎಇಯ ಶಾರ್ಜಾದಲ್ಲಿ ಪತಿ ಕಿರುಕುಳ ಕೊಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ರಕ್ಷಣೆ ಕೋರಿ ವಿಡಿಯೋ ಟ್ವೀಟ್ ಮಾಡಿದ್ದರು. ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.
Advertisement
ಬೆಂಗಳೂರು ಮೂಲದ ಜಸ್ಮಿನ್ ಸುಲ್ತಾನಾ ಅವರನ್ನು ಮೊಹಮದ್ ಕಿಝಾರುಲ್ಲಾ ಮದುವೆಯಾಗಿದ್ದನು. ಬಳಿಕ ಪತ್ನಿಯನ್ನು ಯುಎಇಯ ಶಾರ್ಜಾಗೆ ಮೊಹಮದ್ ಕರೆದೊಯ್ದಿದ್ದನು. ಅಲ್ಲಿ ಮಹಿಳೆಗೆ ಪತಿ ನಿರಂತರ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮಾನಸಿಕ ಹಾಗೂ ದೈಹಿಕವಾಗಿ ತನಗೆ ಕೊಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಮಹಿಳೆ ರಕ್ಷಣೆ ಕೋರಿ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದರು. ವಿಡಿಯೋದಲ್ಲಿ ನನಗೆ ಪತಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ಮಕ್ಕಳನ್ನು ರಕ್ಷಿಸಿ. ಭಾರತಕ್ಕೆ ನಾನು ವಾಪಸ್ ಹೋಗಲು ಸಹಾಯ ಮಾಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದರು.
Advertisement
Advertisement
ಈ ವಿಡಿಯೋ ಟ್ವೀಟ್‍ಗೆ ಪ್ರಧಾನಿ ನರೇಂದ್ರ ಮೋದಿ, ದುಬೈ ಪೊಲೀಸ್ ಹಾಗೂ ಭಾರತೀಯ ರಾಯಭಾರಿಯ ಹ್ಯಾಶ್ ಟ್ಯಾಗ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.
Advertisement
ಈ ಬಗ್ಗೆ ಶಾರ್ಜಾ ಪೊಲೀಸರು ಟ್ವೀಟ್ ಮಾಡಿ, ಭಾರತೀಯ ಮಹಿಳೆಯೊಬ್ಬರಿಗೆ ಆಕೆಯ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಈಗಾಗಲೇ ಈ ಸಂಬಂಧ ಮಹಿಳೆಯ ದೂರು ಪಡೆದು ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಮಹಿಳೆಯನ್ನು ನಾವು ಭೇಟಿ ಮಾಡಿದ್ದೇವೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಾವು ಕೂಡ ಆರೋಪಿಯನ್ನು ವಿಚಾರಣೆ ನಡೆಸಲಿದ್ದೇವೆ. ಮಹಿಳೆಗೆ ತಮ್ಮಿಂದ ಆಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದೆ.
ಅಧಿಕಾರಿಗಳು ರಕ್ಷಿಸಿದ ಬಳಿಕ ಮಹಿಳೆ ಪ್ರತಿಕ್ರಿಯಿಸಿ, ಟ್ವಿಟ್ಟರ್ ಹಾಗೂ ನನ್ನ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿ ಬೆಂಬಲಕ್ಕೆ ನಿಂತು, ನನ್ನ ನೋವಿಗೆ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈಗ ಪತಿಯ ಕಿರುಕುಳದಿಂದ ಮುಕ್ತಿ ಪಡೆದಿದ್ದೇನೆ. ಈಗಾಗಲೇ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ವರ್ಷ ನಾನು ದಾಂಪತ್ಯ ಜೀವನದಲ್ಲಿ ಅನುಭವಿಸಿದ ನೋವು, ಕಿರುಕುಳಕ್ಕೆ ಮುಕ್ತಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯ ಟ್ವೀಟ್‍ಗೆ ಬೆಂಗಳೂರು ಪೊಲೀಸರು ರೀ-ಟ್ವೀಟ್ ಮಾಡಿ, ದಯವಿಟ್ಟು ಬೆಂಗಳೂರಿನ ನಿಮ್ಮ ವಿಳಾಸವನ್ನು ನಮಗೆ ಮೆಸೇಜ್ ಮಾಡಿ ಎಂದು ಹೇಳಿದ್ದಾರೆ.