-ಲ್ಯಾಪ್‍ಟ್ಯಾಪ್ ನಿಂದ ಬೆಂಗ್ಳೂರು ಯುವಕ ದೆಹಲಿಯಲ್ಲಿ ಪತ್ತೆ!
ಬೆಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಯೊಬ್ಬ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಓದು ಮುಂದುವರಿಸಿದ್ದನು. ಆದರೆ ಇದ್ದಕ್ಕಿದ್ದ ಹಾಗೆ ಪತ್ರ ಬರೆದಿಟ್ಟು ನನ್ನನ್ನ ಹುಡುಕಬೇಡಿ, ಧನ್ಯವಾದಗಳು ಚಿಕ್ಕಪ್ಪ ಎಂದು ಕಾಣೆಯಾಗಿದ್ದನು. ಈಗ ವಿದ್ಯಾರ್ಥಿ ಪತ್ತೆಯಾಗಿದ್ದಾನೆ.
ದೇವಾಂಶ್ ಪತ್ತೆಯಾಗಿರುವ ಯುವಕ. ಬಂಡೇಪಾಳ್ಯದ ಆರ್ಟ್ ಅಂಡ್ ಡಿಸೈನ್ ಕಾಲೇಜಿನಲ್ಲಿ ಓದುತ್ತಿದ್ದು, ವ್ಯಾಸಂಗಕ್ಕಾಗಿ ಅಂತ ಬಂದು ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದನು. ಆದರೆ ಖರ್ಚಿಗೆ ತನ್ನ ಎಟಿಎಂ ಕಾರ್ಡ್ ನಲ್ಲಿ 3 ಸಾವಿರ ಹಣ ಡ್ರಾ ಮಾಡಿಕೊಂಡು ಮನೆಯಲ್ಲಿ ತನ್ನ ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ಗಳನ್ನ ಬಿಟ್ಟು ಹೋಗಿದ್ದನು. ಈ ಹಿನ್ನೆಲೆಯಲ್ಲಿ ತಕ್ಷಣವೇ ಚಿಕ್ಕಪ್ಪ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಸಿನಿಮಾ:
ಬೆಂಗಾಲಿಯ ಮಸಾನ್ ಸಿನಿಮಾ ನೋಡಿ ಪ್ರೇರಿತಗೊಂಡು ಚಿತ್ರದಲ್ಲಿ ಬರುವ ವಾರಣಾಸಿಯ ಸನ್ಯಾಸಿಗಳಿಗೆ ಮನಸೋತಿದ್ದನು. ದೇವಾಂಶ್ ತಾನು ಕೂಡ ಸನ್ಯಾಸಿಯಾಗಬೇಕು ಅಂದುಕೊಂಡಿದ್ದು, ವಾರಣಾಸಿಯ ಕೆಲ ಸಂಪ್ರದಾಯದ ಬಗ್ಗೆ ತಿಳಿದುಕೊಂಡು ಹೊರಟಿದ್ದನು. ಅಲ್ಲದೇ ಹೊರಡುವಾಗ ಹಿಂದಿಯಲ್ಲಿ ಪತ್ರ ಬರೆದಿಟ್ಟು ತೆರಳಿದ್ದನು. ಇದಾದ ಬಳಿಕ ತನ್ನ ಗೆಳೆಯರೊಂದಿಗೆ ಮಾತನಾಡಿ, ತನಗೆ ಗಾಂಜಾ ಬೇಕು ಎಂದಿದ್ದನು. ದೇವಾಂಶ್ ಗೆ ಗಾಂಜಾ ಚಟವಿದ್ದರೂ ಮನೆಯಲ್ಲಿ ಎಲ್ಲೂ ತೋರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.
Advertisement
Advertisement
ಹುಡಕಾಟ:
ಎಫ್‍ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದ ಬಂಡೇಪಾಳ್ಯ ಪೊಲೀಸರು, ಪ್ರತ್ಯೇಕ ತಂಡವನ್ನ ರಚಿಸಿ, ಎಲ್ಲಾ ರೈಲ್ವೇ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಮನೆಯಲ್ಲಿ ಸಿಕ್ಕ ಪತ್ರ ಹಾಗೂ ಆತನ ಫೋನ್ ಬಗ್ಗೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಆತ ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್ ಪರಿಶೀಲನೆ ನಡೆಸಿದ್ದಾರೆ. ಆಗ ಲ್ಯಾಪ್ ಟಾಪ್ ನಲ್ಲಿ ಅತಿ ಹೆಚ್ಚು ಬಾರಿ ‘ಮಸಾನ್’ ಸಿನಿಮಾ ನೋಡಿದ್ದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಸನ್ಯಾಸತ್ವ ಕುರಿತು ಕೆಲ ರೀಸರ್ಚ್ ವರ್ಕ್ ಕೂಡ ಮಾಡಿದ್ದನು. ಜೊತೆಗೆ ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳು ಇರುತ್ತಾರೆ ಹಾಗೂ ಹೇಗಿರುತ್ತೆ ಅನ್ನೋದರ ಬಗ್ಗೆ ಅರಿತಿದ್ದನು. ಈ ಹಿನ್ನೆಲೆಯಲ್ಲಿ ಮೊದಲೇ ಸಿದ್ಧವಾಗಿ ಯುವಕ ದೇವಾಂಶ್ ಮನೆ ಬಿಟ್ಟು ಹೊರಟಿದ್ದನು.
ಪೊಲೀಸರು ಗೋವಾ, ಡೆಲ್ಲಿ ರೈಲ್ವೆ ನಿಲ್ದಾಣದಲ್ಲಿ ವಿಚಾರಿಸಿದ್ದರು. ಅದಕ್ಕೂ ಮೊದಲು ಪೊಲೀಸರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದರ ಅನ್ವಯ ಬೆಂಗಳೂರಿನಿಂದ ವಾರಣಾಸಿಗೆ ಹೊರಟ ರೈಲಿನ ಬಗ್ಗೆ ವಿಚಾರಿಸಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಹೊರತೆಗೆದಿದ್ದರು. ದೇವಾಂಶ್ ನಾಪತ್ತೆಯಾದ ದಿನದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಸಿಸಿಟಿವಿ ಫೂಟೇಜ್ ನನ್ನು ಪರಿಶೀಲನೆ ನಡೆಸಿದ್ದಾರೆ. ಆಗ ದೇವಾಂಶ್ ಸಂಜೆ 4:20ಕ್ಕೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಕಾಣಿಸಿಕೊಂಡಿದ್ದನು.
ಇದೇ ವೇಳೆ ಅಲ್ಲಿಂದ ಸುಮಾರು 5:20ಕ್ಕೆ ಮೆಜೆಸ್ಟಿಕ್ ನಿಂದ ವಾರಣಾಸಿಗೆ ರೈಲು ಹೊರಟಿತ್ತು. ಆ ರೈಲಿನಲ್ಲಿ ದೇವಾಂಶ್ ಹೋಗಿರಬಹುದು ಎಂಬ ಶಂಕೆ ಮೇರೆಗೆ ಎಲ್ಲಾ ಕಡೆ ಹುಡುಕಾಡಿದ್ದರು. ಅಲ್ಲಿನ ಆರ್ ಪಿಎಫ್ ಸಹಾಯದ ಮೇರೆಗೆ ದೆಹಲಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೂಲಕ ನಾಪತ್ತೆಯಾದ ಯುವಕನನ್ನ ಪತ್ತೆ ಹಚ್ಚುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv