ಬೆಂಗಳೂರು: ಆರ್ಸಿಬಿ (RCB) ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ವರಿಗೆ ಹೈಕೋರ್ಟ್ (High Court) 14 ದಿನಗಳ ಕಾಲ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.
ಡಿಎನ್ಎ ಸಂಸ್ಥೆಯ ಸಿಬ್ಬಂದಿ ಕಿರಣ್, ಸುಮಂತ್, ಸುನೀಲ್ ಮ್ಯಾಥ್ಯೂ ಹಾಗೂ ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪಿಪಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ನ್ಯಾಯಾಲಯ ಆರೋಪಿಗಳಿಗೆ ಜೂ.19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇದನ್ನೂ ಓದಿ: Chinnaswamy Stampede | ನಾನೇನ್ ಕ್ರೈಂ ಮಾಡಿದ್ದೀನಿ?: ಡಿ.ಕೆ ಶಿವಕುಮಾರ್
ಆರ್ಸಿಬಿಯ ಸಾಮಾಜಿಕ ಜಾಲತಾಣದಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಪೋಸ್ಟ್ ಮಾಡಲಾಗಿತ್ತು. ಪೊಲೀಸರ ಅನುಮತಿ ಪಡೆಯದೇ ಬುಧವಾರ ಬೆಳಗ್ಗೆ ಈ ಪೋಸ್ಟ್ ಪ್ರಕಟವಾಗಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಪರೇಡ್ಗೆ ಅನುಮತಿ ನಿರಾಕರಿಸಿದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಡಿಲೀಟ್ ಆಗಿರಲಿಲ್ಲ. ಅಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆಗೆ ಉಚಿತ ಟಿಕೆಟ್ ಎಂದು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿ ಲಕ್ಷಾಂತರ ಜನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸೇರಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದವರನ್ನು ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆ ಇಲ್ಲಿಯವರೆಗೆ ನಾಲ್ವರ ಬಂಧನವಾಗಿದೆ. ಇದನ್ನೂ ಓದಿ: ನಿಖಿಲ್ ಸೋಸಲೆನಾ ಬಿಟ್ಬಿಡಿ – ಪೊಲೀಸ್ರಿಗೆ ಒತ್ತಡ ಹಾಕಿದ್ದಕ್ಕೆ ಗೋವಿಂದರಾಜ್ ತಲೆದಂಡ