ಆಪರೇಷನ್, ಸರ್ಜರಿಯಲ್ಲಿ ಬಿಎಸ್‍ವೈ ಸ್ಪೆಷಲಿಸ್ಟ್, ನಾನು ಡಾಕ್ಟರ್ ಅಲ್ಲ – ಸಿದ್ದರಾಮಯ್ಯ

Public TV
2 Min Read
BSY Siddu

– ಹೈಕಮಾಂಡ್ ಜೊತೆ ಚರ್ಚಿಸಿ ಸರ್ಕಾರ ರಚಿಸಿದ್ದು ದೇವೇಗೌಡರು
– ನಾನು ಹೈಕಮಾಂಡ್ ಆದೇಶ ಪಾಲಿಸಿದೆ

ಬೆಂಗಳೂರು: ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ ಯಡಿಯೂರಪ್ಪ ಅವರೇ ಸ್ಪೆಷಲಿಸ್ಟ್. ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಇಂದು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾವಾಗಿಯೇ ಹಣ, ಅಧಿಕಾರದ ಆಮಿಷ ಒಡ್ಡಿ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತಂದರೆ ಅದು ಆಪರೇಷನ್ ಆಗುತ್ತದೆ. ಆದರೆ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅವರಾಗಿಯೇ ಬಂದರೆ ಅದು ಆಪರೇಷನ್ ಹೇಗಾಗುತ್ತದೆ. ಈ ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ ಅವರೇ ಸ್ಪೆಷಲಿಸ್ಟ್. ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಲು ನನ್ನ ಮಗನನ್ನು ಸಿಎಂ ಮಾಡಿದರು ಎಂಬ ಹೆಚ್‍ಡಿಡಿ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು. ಹೈಕಮಾಂಡ್ ಆದೇಶವನ್ನು ನಾನು ಪಾಲಿಸಿದೆ. ಇದರಲ್ಲಿ ನನ್ನ ಪಾತ್ರ ಇಷ್ಟೇ. ಹೈಕಮಾಂಡ್ ಜೊತೆ ಚರ್ಚಿಸಿದ್ದು, ಸರ್ಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‍ನಿಂದ ಇನ್ನು ಕೆಲವರು ಬಿಜೆಪಿ ಸೇರಲಿದ್ದಾರೆ ಎಂಬ ಸಿಟಿ ರವಿ ಅವರ ಹೇಳಿಕೆಗೆ ಟಾಂಗ್ ನೀಡಿದ ಅವರು, ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದಿಂದ ಇನ್ನಷ್ಟು ಜನ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಸಿಟಿ ರವಿ ಅವರು ಹೇಳಿದ್ದಾರಂತೆ. ಮೊದಲು ಬಿಜೆಪಿ ಬಿಟ್ಟು ಹೋಗುತ್ತಿರುವವರನ್ನು ತಡೆಯಲಿ, ಆಮೇಲೆ ಬೇರೆ ಮಾತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹೇಳಿಕೆಗಳನ್ನು ಕೇಳಿ ಕೇಳಿ ಸಾಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್ ಕಮಲವನ್ನೂ ಮಾಡ್ತಾರೆ, ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದರೆ ಏನು ಅಂತಲೇ ಅವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ. ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಂತರ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನಮ್ಮ ಗುರಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. 15 ಸ್ಥಾನ ಗೆದ್ದರೂ ಆಶ್ಚರ್ಯವಿಲ್ಲ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *