6 ವರ್ಷಗಳ ಬಳಿಕ ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

Public TV
2 Min Read
mother son 1

ಬೆಂಗಳೂರು:  ಆರು ವರ್ಷಗಳ ಬಳಿಕ ತಾಯಿ ಮತ್ತು ಮೂಕ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರ ಜೊತೆ ತರಕಾರಿ ಮಾರಾಟಕ್ಕೆ ಭರತ್ ಬಂದಿದ್ದರು. ಆಗ ಭರತ್ ಕೇವಲ 13 ವರ್ಷದವರಾಗಿದ್ದರು. ಈ ವೇಳೆ ನಿಗೂಢವಾಗಿ ಭರತ್ ಕಣ್ಮೆರೆಯಾಗಿದ್ದಾರೆ. ಮೂಗ ಮಗನನ್ನು ಕಾಣದೇ ಕಂಗಲಾಗಿ, ಯಲಹಂಕದ ರೈತ ಸಂತೆಯಲ್ಲಿ ಪಾರ್ವತಮ್ಮ ಅವರು ಹುಡುಕಾಟ ನಡೆಸಿ, ಕೊನೆಗೆ ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಕಾಣೆಯಾದ ಪುತ್ರನಿಗೆ ಹಂಬಲಿಸಿ ಕಂಡ, ಕಂಡ ದೇವರಿಗೆಲ್ಲ ಹರಕೆ ಹೊತ್ತಿದ್ದರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

mother son 3

ಯಲಹಂಕದಿಂದ ತಪ್ಪಿಸಿಕೊಂಡ ಭರತ್ ಹತ್ತು ತಿಂಗಳ ಬಳಿಕ ನಾಗ್ಪುರ ರೈಲ್ವೆ ನಿಲ್ದಾಣ ತಲುಪಿದ್ದು, ಈ ವೇಳೆ ದಿಕ್ಕು ಕಾಣದೇ ಕಂಗೆಟ್ಟು ಓಡಾಡುತ್ತಿದ್ದ ಭರತ್‍ನನ್ನು ಕಂಡು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ರಕ್ಷಿಸಿದ್ದರು. 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‍ಗೆ ಆಧಾರ್ ಕಾರ್ಡ್ ಮಾಡಿಸಲು ಪುನರ್ ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿ, 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್‍ನನ್ನು ಮಹೇಶ್ ಎಂಬ ಅಧಿಕಾರಿ ಕರೆದೊಯ್ದಿದ್ದರು. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

ಭರತ್ ಬೆರಳು ಮುದ್ರೆ ಪಡೆದು ಆಧಾರ್ ಸೇವಾ ಕೇಂದ್ರಕ್ಕೆ ಅಧಿಕಾರಿಗಳು ಕಳುಹಿಸಿದ್ದರು. ಈ ವೇಳೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ ಅವರು ಭರತ್‍ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

mother son 2

ಈ ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಮಹೇಶ್ ಅವರು ವಿನಂತಿಸಿದ್ದಾರೆ. ನಂತರ ಮಹೇಶ್ ಅವರ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಬಂದಿದೆ. ಅಲ್ಲದೇ ಆಧಾರ್ ಕಾರ್ಡ್‍ನಲ್ಲಿ ಭರತ್‍ನ ತಾಯಿ ಪಾರ್ವತಮ್ಮ ಮೊಬೈಲ್ ನಂಬರ್ ಸಿಕ್ಕಿದೆ. ಹೀಗಾಗಿ ಈ ಬಗ್ಗೆ ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು.

ಕೊನೆಗೆ ನಾಗ್ಪುರ ಪುನರ್ವಸತಿ ಕೇಂದ್ರ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸಿ ಭರತ್ ತಾಯಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಪಾರ್ವತಮ್ಮರವರನ್ನು ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸಿದ್ದಾರೆ. ಕೊನೆಗೆ ಮಾ.7 ರಂದು ಮಗನನ್ನು ಕಂಡು ಪಾರ್ವತಮ್ಮ ಅವರು ಭಾವುಕರಾಗಿ ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆ ತಂದಿದ್ದಾರೆ. ಒಟ್ಟಾರೆ 6 ವರ್ಷಗಳ ಬಳಿಕ ಕೊನೆಗೂ ಭರತ್ ತಾಯಿಯ ಮಡಿಲು ಸೇರಿದ್ದು, ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳು ಕಾರ್ಯಕ್ಕೆ ಒಂದು ಸಲಾಂ ಎಂದೇ ಹೇಳಬಹುದು.

Share This Article
Leave a Comment

Leave a Reply

Your email address will not be published. Required fields are marked *