Connect with us

Bengaluru City

ಹೊಸ ವರ್ಷಾಚರಣೆ ವೇಳೆ ಕೋರಮಂಗಲದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

Published

on

– ಮತ್ತೆ ಅಹಿತಕರ ಘಟನೆಗೆ ಸಾಕ್ಷಿಯಾದ ಹೊಸ ವರ್ಷಾಚಾರಣೆ

ಬೆಂಗಳೂರು: 2020 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡುತ್ತಿರುವ ಸಂದರ್ಭದಲ್ಲೇ ಕಿಡಿಗೇಡಿಗಳು ಯುವತಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಮತ್ತೆ ಅಹಿತಕರ ಘಟನೆಗೆ ಸಿಲಿಕಾನ್ ಸಿಟಿಯನ್ನು ಸಾಕ್ಷಿಯನ್ನಾಗಿಸಿದ್ದಾರೆ.

ಕೋರಮಂಗಲದ 5ನೇ ಬ್ಲಾಕ್‍ನಲ್ಲಿ ಸಂಭ್ರಮಾಚರಣೆ ವೇಳೆ ಯುವತಿಯರ ತಂಡದ ಮೇಲೆ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಬೆದರಿಕೆ ಕೂಡ ಹಾಕಿದ್ದಾರೆ. ಈ ವೇಳೆ ಯುವತಿಯೋರ್ವಳು ಸಮೀಪದಲ್ಲೇ ಕರ್ತವ್ಯ ನಿರತರಾಗಿದ್ದ ಪೊಲೀಸರ ಎದುರು ಕಣ್ಣೀರು ಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ತಿಳಿಸಿದ್ದಾಳೆ. ಯುವತಿ ದೂರು ನೀಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಯುವತಿ ಜೊತೆ ಡಿಸಿಪಿ ಇಶಾ ಪಂಥ್ ಮಾತುಕತೆ ನಡೆಸಿದ್ದು, ಪ್ರಸ್ತುತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾಮುಕರ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಫೂಟೇಜ್‍ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿ ಸಹ ಹೊಸ ವರ್ಷದ ಜೋಶ್‍ನಲ್ಲಿದ್ದ ಯುವತಿಯೊಬ್ಬಳು ಡ್ಯಾನ್ಸ್ ಮಾಡುತ್ತಿರುವಾಗ ಕೆಳಗೆ ಬಿದ್ದಿರೋ ಘಟನೆ ನಡೆದಿದೆ. ಬ್ರಿಗೇಡ್ ರೋಡ್‍ನ ಪಬ್‍ನಲ್ಲಿ ಯುವತಿ ಡ್ಯಾನ್ಸ್ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿಯ ಕೈತಾಗಿ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ತಕ್ಷಣ ಯುವತಿ ಬಾಯಿಯಲ್ಲಿ ರಕ್ತ ಬಂದಿದೆ. ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಇತ್ತ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಉತ್ತರ ಭಾರತದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಬಾಯಿ ಹಾಗೂ ಮೂಗಿನಲ್ಲಿ ರಕ್ತ ಬರುವ ಹಾಗೆ ಯುವಕನನ್ನು ಥಳಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ನೇಹಿತನ ಸಹಾಯದಿಂದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಕುಡುಕರ ಆಟಾಟೋಪ ಕೂಡ ಮಿತಿಮೀರಿತ್ತು. ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಬೆಂಗಳೂರಿನ ಕೆಲವೆಡೆ ಕುಡುಕರು ರಸ್ತೆಯಲ್ಲೇ ಬಿದ್ದಿದ್ದರೆ, ಇನ್ನೂ ಕೆಲವರು ಇಡೀ ರಸ್ತೆಯೇ ತಮ್ಮದೆನ್ನುವ ರೀತಿ ರಾದ್ಧಾಂತ ಮಾಡಿದ್ದಾರೆ. ಇನ್ನೂ ಕೆಲವರು ಬಾರಿನಿಂದ ಹೊರಬರಲು ಕಷ್ಟಪಡುತ್ತಿದ್ದರು.

Click to comment

Leave a Reply

Your email address will not be published. Required fields are marked *