ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದ ವಾಹನ ಸವಾರರಿಗೆ ಸರ್ಕಾರ ಭಾರೀ ಮೊತ್ತದ ದಂಡವನ್ನು ವಿಧಿಸುತ್ತಿದೆ. ಆದರೆ ಸಂಚಾರ ನಿಯಮ ಹೇಳಿಕೊಟ್ಟು, ವಾಹನ ಚಾಲನ ಕೌಶಲ್ಯವನ್ನು ಪರೀಕ್ಷಿಸುವ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರು ಕಂಠ ಪೂರ್ತಿ ಮದ್ಯ ಕುಡಿದು ವಾಹನ ಚಾಲನೆ ಮಾಡಿ, ಆಟೋಗೆ ಡಿಕ್ಕಿ ಹೊಡೆದಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯ ಸೆಕೆಂಡ್ ಪೇಸ್‍ನಲ್ಲಿ ಘಟನೆ ನಡೆದಿದೆ. ಆನೇಕಲ್ ಸಮೀಪದ ಮರಸೂರು ಬಳಿಯ ಕೆಎ 59 ಹಾಗೂ ದೇವರಚಿಕ್ಕನಹಳ್ಳಿಯ ಕೆಎ 51ರ ಆರ್‌ಟಿಓ ಕಚೇರಿಯ ಮಂಜುನಾಥ್ ಇಂತಹ ಅವಾಂತರ ಸೃಷ್ಟಿಸಿದ ಇನ್ಸ್‌ಪೆಕ್ಟರ್. ಘಟನೆಯಲ್ಲಿ ಆಟೋ ಚಾಲಕ ಸೈಯದ್ ಇಮ್ರಾನ್ ಅವರ ಬಲಗೈ ಮೂಳೆ ಮುರಿದಿದೆ.
Advertisement
ಮಂಜುನಾಥ್ ಕಂಠ ಪೂರ್ತಿ ಕುಡಿದು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಸೆಕೆಂಡ್ ಪೇಸ್‍ನಲ್ಲಿ ಮಂಜುನಾಥ್ ಅವರ ನಿಯಂತ್ರಣ ತಪ್ಪಿದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಮುಂಭಾಗ ಜಖಂಗೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನೋಡಿ ಸ್ಥಳೀಯರು ಹಾಗೂ ಆಟೋ ಚಾಲಕರು ಕಾರಿನಿಂದ ಮಂಜುನಾಥ್ ಅವರನ್ನು ಹೊರಗೆ ಎಳೆದು ತರಾಟೆ ತೆಗೆದುಕೊಂಡಿದ್ದಾರೆ.
Advertisement
Advertisement
ಮದ್ಯ ಸೇವಿಸಿದ್ದ ಮಂಜುನಾಥ್ ಸಾರ್ವಜನಿಕರ ಮುಂದೆ ನಿಲ್ಲಲು ಸಾಧ್ಯವಾಗದೆ ಜೋಲಿ ಹೊಡೆಯುತ್ತಿದ್ದರು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ನಿಬಾಯಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ ಸೈಯದ್ ಇಮ್ರಾನ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ್ ಅವರನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.