ಬೆಂಗಳೂರು: ಕೌಟುಂಬಿಕ ಕಲಹದಿಂದ ಗಂಡನಿಗೆ ಹೆಂಡತಿಯೇ ನಡು ಬೀದಿಯಲ್ಲಿ ಹೊಡೆದ ಘಟನೆ ಬೆಂಗಳೂರಿನ ಬಾಣಸವಾಡಿಯ ಮಾರುತಿ ಸೇವಾ ನಗರದಲ್ಲಿ ನಡೆದಿದೆ. ಮಾರುತಿ ಸೇವಾನಗರದ ವಿನೋದ್ ಮತ್ತು ದಿವ್ಯಾ ಇಬ್ಬರು ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದರು. ಆದರೆ ಗಂಡ ಹೆಂಡತಿಯ ನಡುವೆ ಸಾಮರಸ್ಯ ಇರಲಿಲ್ಲ.
ನಾಲ್ಕು ವರ್ಷದಿಂದ ಇಬ್ಬರಿಗೂ ಸಾಮರಸ್ಯ ಇಲ್ಲದ ಹಿನ್ನೆಲೆಯಲ್ಲಿ ಪತ್ನಿ ದಿವ್ಯಾ ತನ್ನ ತಾಯಿಯ ಮನೆಗೆ ಬಂದು ಸೇರಿಕೊಂಡಿದ್ದರು. ಹೆಂಡತಿಯ ಕಾಟವೇ ಬೇಡ ಎಂದು ಗಂಡ ಕೂಡ ತಾನಾಯ್ತು ತನ್ನ ಪಾಡಾಯ್ತು ಅಂತ ಸುಮ್ಮನೆ ಇದ್ದ. ಆದರೆ ಹೆಂಡತಿಯ ಮನೆಯವರು ಮಾತ್ರ ಸುಮ್ಮನೇ ಇರಲಿಲ್ಲ. ವಿನೋದ್‍ನ ಅಸಾಹಯಕತೆಯನ್ನು ಲಾಭ ಪಡೆದು ಪದೇ ಪದೇ ಕ್ಯಾತೆ ತೆಗೆದಿದ್ದರು. ಕ್ಯಾತೆಯಿಂದ ದೂರ ಇದ್ರು ಗಂಡನನ್ನು ಮಾತ್ರ ಹೆಂಡತಿ ಬಿಡುತ್ತಿರಲಿಲ್ಲ.
ಕೊನೆಗೆ ಮೂರು ದಿನಗಳ ಹಿಂದೆ ವಿನೋದ್‍ನ ಹೆಂಡತಿ ದಿವ್ಯಾ ತನ್ನ ಸಂಬಂಧಿಕರೊಂದಿಗೆ ಬಂದು ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಿವ್ಯಾ ಸಂಬಂಧಿ ಅಣ್ಣಯ್ಯಪ್ಪ ಹಲಸೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆಗಿದ್ದರು ಕೂಡ ವಿನೋದ್‍ಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಬೇಸತ್ತ ವಿನೋದ್ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ಆರೋಪಿಗಳಿಗಾಗಿ ಬಾಣಸವಾಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.