ಕೋಲಾರ: ಅದು ದೀನ ದಲಿತರ ಏಳಿಗೆಗೆ ಇರುವ ಸರ್ಕಾರದ ಅಂಗ ಸಂಸ್ಥೆ, ಏಳಿಗೆ ಮಾಡ್ತೀವೆಂದು ದಲಿತರಿಂದ ಸಾವಿರಾರು ರೂಪಾಯಿಯನ್ನ ಪಡೆದಿದೆ. ಲಕ್ಷಾಂತರ ರೂಪಾಯಿ ಸಾಲ ಕೊಡುವುದಾಗಿ ಹಣ ಕಟ್ಟಿಸಿಕೊಂಡು ಇದುವರೆಗೂ ಯಾವುದೇ ಸಾಲವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಅನಿಷ್ಠ ಮಲ ಹೊರುತ್ತಿದ್ದ ಕುಟುಂಬಗಳು ಕಂಗಾಲಾಗಿವೆ.
ಸಾಲಕ್ಕಾಗಿ ಬ್ಯಾಂಕ್‍ನಲ್ಲಿ ಸಾವಿರಾರು ರೂಪಾಯಿ ಹಣ ಪಾವತಿಸಿರುವ ಅರ್ಜಿಗಳನ್ನು ತೋರಿಸುತ್ತಿರುವ ಮಹಿಳೆಯರು, ಮತ್ತೊಂದೆಡೆ ಸರ್ಕಾರ ನೆರವು ನೀಡದೆ ಇದ್ರೆ ನಾವು ಮತ್ತೆ ಮಲ ಹೊರುವ ಅನಿಷ್ಠ ಮಾಡುವುದಾಗಿ ಎಚ್ಚರಿಸುತ್ತಿರುವ ಸಫಾಯಿ ಕರ್ಮಾಚಾರಿಗಳು. ಇದು ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಾವಿರಾರು ಕುಟುಂಬಗಳ ಪರಿಸ್ಥಿತಿ.
ಹೌದು. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಮಲಹೊರುವ ವೃತ್ತಿಯಲ್ಲಿದ್ದ ಸಾವಿರಾರು ಜನರಿಗೆ ಪುನರ್ ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿಯಲ್ಲಿ ಬ್ಯಾಂಕ್‍ನಲ್ಲಿ ಸಾವಿರಾರು ರೂಪಾಯಿ ಹಣ ಠೇವಣಿ ಇಡಲಾಗಿದೆ. ಅದರಂತೆ ಒಂದು ಲಕ್ಷಕ್ಕೆ ತಲಾ 9 ಸಾವಿರ ರೂಪಾಯಿಯಂತೆ ಫಲಾನುಭವಿಗಳು ಬ್ಯಾಂಕ್‍ಗೆ ಪಾವತಿ ಮಾಡಿದ್ದಾರೆ. ಆದ್ರೆ ಬಡವರಿಗೆ 6 ತಿಂಗಳು ಕಳೆದ್ರೂ ಇದುವರೆಗೂ ಸಾಲವೂ ಸಿಗದೆ, ಕಟ್ಟಿದ ಹಣವೂ ಇಲ್ಲದೇ ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿಷೇಧಿಸಲಾಗಿದೆ. ಇತ್ತ ಅನಿಷ್ಠ ಪದ್ದತಿಯಲ್ಲಿ ತೊಡಗಿದ್ದವರು ಕುಡಿತದ ಚಟ ಸೇರಿದಂತೆ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಂತಹ ಕುಟುಂಬಗಳು ಜೀವನ ನಿರ್ವಹಣೆಗಾಗಿ ಕುಟುಂಬದ ಪೋಷಣೆ ಮಹಿಳೆಯರ ಹೆಗಲ ಮೇಲಿದ್ದು ಜೀವನ ಸಾಗಿಸುತ್ತಿದ್ದಾರೆ.
ಸರ್ಕಾರವು ರೂಪಿಸಿರುವ ಯೋಜನೆಗಳ ಮೂಲಕ ನಮಗೆ ಪುನರ್ವಸತಿ ಹಾಗೂ ಉದ್ಯೋಗ ಕಲ್ಪಿಸಿದ್ದೇ ಆದಲ್ಲಿ ಸಾಕಷ್ಟು ಅನಕೂಲವಾಗಲಿದೆ. ಇಲ್ಲವಾದಲ್ಲಿ ನಾವು ಅನಿಷ್ಟ ಮಲ ಹೊರುವ ವೃತ್ತಿಯನ್ನೇ ಮುಂದುವರೆಸಬೇಕಾಗುತ್ತೆ ಎಂಬ ಕೂಗು ಇಲ್ಲಿನ ಗ್ರಾಮಸ್ಥರಲ್ಲಿದೆ.
ಸರ್ಕಾರ ಮಲ ಹೊರುವ ಅನಿಷ್ಠ ಪದ್ಧತಿಯನ್ನು ನಿಷೇಧಿಸಿದೆ. ಇಲ್ಲಿನ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿ ಉದ್ಯೋಗದ ನೆರವು ನೀಡುವುದು ಆದ್ಯ ಕರ್ತವ್ಯ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಮ್ಮದು.
https://youtu.be/6M03AUV28c8