– ಜು.6 ಕ್ಕೆ ಮೋಹನ್ ಭಾಗವತ್ ಆಗಮನ
ಬೆಳಗಾವಿ: ಕಳೆದ ಮಾರ್ಚ್ ತಿಂಗಳಲ್ಲಿ ಹರ್ಯಾಣದ ಸಮಾಲ್ಖಾದಲ್ಲಿ ಯಶಸ್ವಿಯಾಗಿ ನಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಮುಖ ಸಭೆಯ ಬೆನ್ನಲ್ಲೇ, ಈ ಬಾರಿಯ ಪ್ರತಿಷ್ಠಿತ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಕುಂದಾನಗರಿ ಬೆಳಗಾವಿ (Belagavi) ವೇದಿಕೆಯಾಗಲಿದೆ.
ಜುಲೈ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಈ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ಈ ವಾರ್ಷಿಕ ಸಭೆಯಲ್ಲಿ ಸಂಘದ ವಿವಿಧ ಸ್ತರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ
ದೇಶವ್ಯಾಪಿಯ ಎಲ್ಲಾ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು, ಸಂಘಟನಾ ವ್ಯವಸ್ಥೆಯ 11 ಕ್ಷೇತ್ರಗಳ ಪ್ರಮುಖ ಪ್ರಚಾರಕರು ಸೇರಿದಂತೆ ಒಟ್ಟು 46 ಪ್ರಾಂತಗಳ ಪ್ರಮುಖ ಕಾರ್ಯಕರ್ತರು., ಸಂಘ ಪ್ರೇರಿತ 32 ವಿವಿಧ ಸಂಘಟನೆಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವದ (RSS Centenary Celebrations) ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಂಘದ ಶಾಖೆಗಳ ವಿಸ್ತರಣೆ ಮತ್ತು ಮುಂಬರುವ ದಿನಗಳ ದೇಶವ್ಯಾಪಿ ಕಾರ್ಯಯೋಜನೆಗಳ ಕುರಿತು ಈ ಸಭೆಯಲ್ಲಿ ಗಂಭೀರ ಹಾಗೂ ಮಹತ್ವದ ಚರ್ಚೆಗಳು ನಡೆಯಲಿವೆ. ಇದನ್ನೂ ಓದಿ: ಆರ್‌ಎಸ್‌ಎಸ್ ನೋಂದಣಿ ವಿವಾದ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಕ್ರಿಯೆ ಬೇಡ ಎಂದ ಸಂಘ
ಸರಸಂಘಚಾಲಕರ ಮುಂಚಿತ ಆಗಮನ ಹಾಗೂ ರಾಷ್ಟ್ರೀಯ ನಾಯಕರ ಉಪಸ್ಥಿತಿಯ ಹಿನ್ನೆಲೆಯಲ್ಲಿ, ಬೆಳಗಾವಿ ನಗರದಾದ್ಯಂತ ಯಾವುದೇ ಲೋಪದೋಷಗಳಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅತ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.
