– ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್ ಮುಖಂಡರ ಸೂಚನೆ
ಬೆಂಗಳೂರು: ಆರ್‌ಎಸ್‌ಎಸ್ (RSS) ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬರೆದಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ.
ಈ ಕುರಿತು ಇಂದು ನಡೆದ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಬಿಜೆಪಿ ನಾಯಕರಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರಸಂಘಚಾಲಕ ಮೋಹನ್ ಭಾಗವತ್ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಕೇರಳದಲ್ಲಿಯೂ ಈ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲೂ ಈ ವಿಷಯದ ಬಗ್ಗೆ ಈ ಹಿಂದೆ ಮಾತನಾಡಲಾಗಿದೆ ಎಂದು ಸಂಘದ ಮುಖಂಡರು ಸಭೆಯಲ್ಲಿ ಉಲ್ಲೇಖಿಸಿದ್ದಾರೆ.
ನೂರು ವರ್ಷಗಳಿಂದ ಸಂಘದ ಕುರಿತು ಇಂತಹ ಪ್ರಶ್ನೆಗಳು ಕೇಳಿಬರುತ್ತಲೇ ಇವೆ. ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವನ್ನೂ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಕೇಳಿರುವ ಪ್ರಶ್ನೆಗಳು ರಾಜಕೀಯ ಉದ್ದೇಶದಿಂದಲೇ ಕೇಳಿರುವುದು ಸ್ಪಷ್ಟ. ಈ ಹಂತದಲ್ಲಿ ಪ್ರತಿಕ್ರಿಯೆ ನೀಡಿದರೆ ವಿವಾದ ಮತ್ತಷ್ಟು ಜೀವಂತವಾಗುವ ಸಾಧ್ಯತೆ ಇದೆ. ಆದ್ದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದೇ ಸೂಕ್ತ ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಹಾಸನ, ತುಮಕೂರಿನಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ
ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟವರು ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಂಡರೆ ಆಗ ಅಗತ್ಯವಿರುವ ಉತ್ತರ ನೀಡಲಾಗುವುದು. ಅಲ್ಲಿಯವರೆಗೆ ಈ ವಿಚಾರದ ಬಗ್ಗೆ ಯಾರೂ ಅನಗತ್ಯವಾಗಿ ಮಾತನಾಡಬಾರದು ಎಂದು ಬಿಜೆಪಿ ನಾಯಕರಿಗೆ ಸಂಘದ ಮುಖಂಡರು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಮಳೆಗಾಗಿ ಕತ್ತೆ ಕಾಂತೇಶ – ಕಸ್ತೂರಿ ಮದುವೆ; ಧಾರವಾಡದ ಶಿರೂರಿನಲ್ಲಿ ವಿಶಿಷ್ಟ ಆಚರಣೆ
