– ಮಗಳನ್ನು ತಬ್ಬಿಕೊಂಡು ಮುದ್ದಾಡಿದ ನರ್ಸ್ ಸುನಂದಾ
ಬೆಳಗಾವಿ: ಅಮ್ಮಾ ಬಾ ಅಮ್ಮಾ ಎಂದು ಕಣ್ಣೀರಿಟ್ಟಿದ್ದ ಬೆಳಗಾವಿಯ ಕಂದಮ್ಮ ಇಂದು ತಾಯಿಯ ಮಡಿಲು ಸೇರಿಕೊಂಡಿದೆ. ಚಿಕ್ಕ ಮಗುವನ್ನು ಬಿಟ್ಟು ಕೊರೊನಾ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನರ್ಸ್ ಸುನಂದಾ ಅವರು ಕ್ಯಾರಂಟೈನ್ ಅವಧಿ ಮುಗಿಸಿ ಮನೆಗೆ ಬಂದಿದ್ದಾರೆ.
ಬೆಳಗಾವಿಯ ಕೋಳಿ ಗಲ್ಲಿಯಲ್ಲಿರುವ ನಿವಾಸಕ್ಕೆ ಸುನಂದಾ ಕೊರೆಪ್ಪಗೊಳ ಅವರು ಬರುತ್ತಿದ್ದಂತೆ ಮಗು ಓಡೋಡಿ ಬಂದು ಅಮ್ಮನನ್ನು ತಬ್ಬಿಕೊಂಡ ಕ್ಷಣ ರೋಮಾಂಚಕವಾಗಿತ್ತು. ಅಮ್ಮಾ ನೀನು ಬಂದ್ಯಾ..? ನಂಗ್ ಬಹಳಾ ಖುಷಿ ಆಯ್ತು. ಯಾಕ್ ಅಳ್ತಾ ಇದ್ದಿಯಾ? ಎಂದು ಮಗು ಅಮ್ಮನ ಮಡಿಲು ಸೇರಿತು. ಅಷ್ಟೇ ಅಲ್ಲದೆ ಸುನಂದಾ ಅವರು ಮಗುವನ್ನು ತಬ್ಬಿಕೊಂಡು ಮುದ್ದಾಡಿ ಖುಷಿ ವ್ಯಕ್ತಪಡಿಸಿದರು.
ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸುನಂದಾ ಅವರು, 21 ದಿನಗಳ ಕಾಲ ಮಗಳನ್ನು ಬಿಟ್ಟಿರುವುದು ಭಾರೀ ದುಃಖ ತಂದಿತ್ತು. ಆದರೆ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ಹೀಗಾಗಿ ದೇಶ ಸೇವೆಯ ಸಿಕ್ಕ ಅವಕಾಶವನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ನನಗೆ ಉಂಟಾಗಿದ್ದ ಪರಿಸ್ಥಿತಿ ಯಾವುದೇ ತಾಯಿಗೂ ಎದುರಾಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹೀಗಾಗಿ ಸಾರ್ವಜನಿಕರು ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಮನೆಯಲ್ಲಿಯೇ ಇದ್ದು ಆರೋಗ್ಯ ಇಲಾಖೆ, ಪೊಲೀಸರಿಗೆ ಸಹಕಾರ ನೀಡಿ ಎಂದು ನರ್ಸ್ ಸುನಂದಾ ಮನವಿ ಮಾಡಿಕೊಂಡರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫೋನ್ ಮಾಡಿ ಮಾತನಾಡಿ ಕಾಳಜಿ ವ್ಯಕ್ತಪಡಿಸಿದರು. ನಮ್ಮ ಸೇವೆಯು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುವುದು ಖುಷಿ ತಂದಿದೆ. ಕೊರೊನಾ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಈ ಹಿಂದೆ ಏನಾಗಿತ್ತು:
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನಿವಾಸಿ ಸುನಂದಾ ಕೊರೆಪುರ್ ಅವರು ಭೀಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಹಾಗೂ ಶಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಸ್ಟಾಫ್ ನರ್ಸ್‍ಗಳಲ್ಲಿ ಸುನಂದಾ ಕೂಡ ಒಬ್ಬರಾಗಿದ್ದರು. ಹೀಗಾಗಿ ಇತರೆ ವೈದ್ಯಕೀಯ ಸಿಬ್ಬಂದಿ ಜೊತೆಗೆ ಸುನಂದಾ ಕೂಡ ಕ್ವಾರಂಟೈನಲ್ಲಿ ಇದ್ದರು. ಆದ್ದರಿಂದ ಕೆಲ ದಿನಗಳಿಂದ ಮನೆಗೆ ಹೋಗಿಲ್ಲ.
ಆದರೆ ಮನೆಗೆ ಬಾರದ ತಾಯಿ ನೆನೆದು ಸುನಂದಾ ಅವರ 3 ವರ್ಷದ ಮಗಳು ಐಶ್ವರ್ಯ ಕಣ್ಣೀರು ಹಾಕುತ್ತಿದ್ದಳು. ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿದ್ದಳು. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಏಪ್ರಿಲ್ 7ರಂದು ತಂದೆ ಸಂತೋಷ ಅಮ್ಮನ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರು ಇದ್ದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು. ಈ ದೃಶ್ಯ ನೋಡಿ ಬೆಳಗಾವಿ, ಕರ್ನಾಟಕ ಅಷ್ಟೇ ಅಲ್ಲದೆ ದೇಶದ ಜನರು ಮಮ್ಮಲ ಮರುಗಿದ್ದರು.