ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲೇ ಭಾರಿ ಹೈಡ್ರಾಮಾ ನಡೆದಿದೆ. ಜಾರಕಿಹೊಳಿ ಸಹೋದರರು ವರ್ಸಸ್ ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಬಣಗಳ ನಡುವೆ ಜಟಾಪಟಿ ಏರ್ಪಟ್ಟಿದೆ.
ಜಾರಕಿಹೊಳಿ ಬಣದ ಅಭ್ಯರ್ಥಿ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಮತದಾನ ಹಕ್ಕು ಪಡೆದವರ ಮತಚೀಟಿ ಇಟ್ಟುಕೊಂಡ ಆರೋಪ ಕೇಳಿಬಂದಿದೆ. ಮತದಾನ ಮಾಡಲು 40 ಡೆಲಿಗೇಷನ್ ಫಾರ್ಮ್ ಕೊಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ರಾಯಭಾಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಬಸಗೌಡ ಆಸಂಗಿ ಕಣಕ್ಕಿಳಿದಿದ್ದಾರೆ. ಇವರು ಸವದಿ-ಕತ್ತಿ ಬಣದಿಂದ ಗುರುತಿಸಿಕೊಂಡಿದ್ದಾರೆ. ಬೆಳಗಾವಿಯ ಇಫಾ ಹೋಟೆಲ್‌ಗೆ ನುಗ್ಗಿ ಬಸಗೌಡ ಆಸಂಗಿ ಬೆಂಬಲಿಗರು ಗಲಾಟೆ ತೆಗೆದಿದ್ದಾರೆ.
ಹೋಟೆಲ್ ಮುಂಭಾಗದಲ್ಲಿ ಸವದಿ ಹಾಗೂ ಜಾರಕಿಹೊಳಿ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ಆಗಿದೆ. ಕೈ-ಕೈ ಮಿಲಾಯಿಸುವ ಹಂತಕ್ಕೆ ಪ್ರಕರಣ ಹೋಗಿದೆ. ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಬರಮನಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದರು.
ಜಾರಕಿಹೊಳಿ ಸಹೋದರರ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ (Ramesh Katti) ಹಾಗೂ ಶಾಸಕ ಲಕ್ಷ್ಮಣ ಸವದಿ (Lakashman Savadi) ತೊಡೆ ತಟ್ಟಿ ನಾವು ಯುದ್ಧಕ್ಕೆ ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ.