– ಮೃತ ಭಿಕ್ಷುಕಿ ಸಂಪಾದಿಸಿದ್ದ ಹಣ ಸಂಬಂಧಿಕರಿಗೆ ಹಸ್ತಾಂತರಿಸಿದ ಸ್ಥಳೀಯರು
ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು (Beggar Women) ಮೃತಪಟ್ಟಿದ್ದು, ಅವರ ಮನೆಯಲ್ಲಿ ಬರೋಬ್ಬರಿ 8 ಲಕ್ಷ ರೂಪಾಯಿಗೂ ಅಧಿಕ ನಗದು ಹಣ ಪತ್ತೆಯಾಗಿರುವ ಘಟನೆ ಮಂಡ್ಯ ನಗರದ (Mandya City) ಗುತ್ತಲು ಬಡಾವಣೆಯಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆಸರೆ ಇಲ್ಲದೇ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ.
ವೃದ್ಧೆಯ ನಿಧನದ ಬಳಿಕ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರದ ನಂತರ ನೂರ್ ವಾಸವಿದ್ದ ಮನೆಗೆ ಹೋಗಿ ಪರಿಶೀಲಿಸಿದಾಗ ಮೂಟೆಗಟ್ಟಲೆ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳ ಕಂತೆಗಳು ಪತ್ತೆಯಾಗಿವೆ.

8 ಲಕ್ಷಕ್ಕೂ ಅಧಿಕ ಮೊತ್ತ
ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಹಣ ಎಣಿಕೆ ಮಾಡಿದ್ದು, ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿರುವುದು ತಿಳಿದುಬಂದಿದೆ. ಬಳಿಕ ಸ್ಥಳೀಯ ಮುಖಂಡರು ಮಾತುಕತೆ ನಡೆಸಿ, ಆ ಹಣವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ. ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
