ತಿರುವನಂತಪುರಂ: ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣಕ್ಕೆ ಕುಟುಂಬಸ್ಥರೇ ಗರ್ಭಿಣಿಯನ್ನು 7 ಕಿ.ಮೀ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ಕೇರಳದ ಪಳಕ್ಕಡದಲ್ಲಿ ನಡೆದಿದೆ.
ಪಳಕ್ಕಡದ ಅಟ್ಟಪಾಡಿ ಎಂಬ ಹಳ್ಳಿಯಲ್ಲಿ 27 ವರ್ಷದ ಆದಿವಾಸಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣ ಕುಟುಂಬಸ್ಥರೇ ಸ್ಥಳೀಯರೊಂದಿಗೆ ಸೇರಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
Advertisement
ಮಹಿಳೆಗೆ ನೋವು ಕಾಣಿಸಿಕೊಂಡಾಗ ಗ್ರಾಮಸ್ಥರು ಅಂಬುಲೆನ್ಸ್ ಸಹಾಯ ಕೇಳಿದ್ದಾರೆ. ಅಂಬುಲೆನ್ಸ್ ವಿಮೆ ಆಗಿದ್ದರೂ ಅದರ ಫಿಟ್ ನೆಸ್ ಚೆಕ್ ಪೂರ್ಣಗೊಳ್ಳದ ಕಾರಣ ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ನಂತರ ಕುಟುಂಬಸ್ಥರು ಬೇರೆ ಸರ್ಕಾರಿ ವಾಹನಕ್ಕೆ ಪ್ರಯತ್ನಿಸಿದ್ದಾರೆ. ಅದೂ ವಿಫಲವಾದ ಕಾರಣ ಬಡಿಗೆಗೆ ಬೆಡ್ಶೀಟ್ ಹಾಕಿ ಅದರಲ್ಲಿ ಆಕೆಯನ್ನು ಮಲಗಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
Advertisement
ಆ ಮಹಿಳೆಯ ಅದೃಷ್ಟ ಚೆನ್ನಾಗಿದ್ದ ಕಾರಣ ಪಕ್ಕದ ಕೊಟ್ಟಹಾರ ಗ್ರಾಮದ ಆದಿವಾಸಿ ಸರಕಾರಿ ಆಸ್ಪತ್ರೆಗೆ ತಲುಪುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
Advertisement
ರಸ್ತೆ ಸಮಸ್ಯೆ:
ಕೇರಳದ ಈ ಅಟ್ಟಪಾಡಿ ಗ್ರಾಮದಲ್ಲಿ ಅತಿ ಹೆಚ್ಚು ಆದಿವಾಸಿಗಳು ವಾಸವಾಗಿದ್ದಾರೆ. ಈಗಾಗಲೇ ಅತಿ ಹೆಚ್ಚು ಶಿಶುಗಳು ಸಾವನ್ನಪ್ಪಿ ಈ ಗ್ರಾಮ ಸುದ್ದಿಯಲ್ಲಿದೆ. ಗ್ರಾಮಕ್ಕೆ ತೆರಳಲು ಇಲ್ಲಿ ಈಗಲೂ ಸರಿಯಾದ ದಾರಿಯಿಲ್ಲ. ಈ ಕಾಡು ದಾರಿಯಲ್ಲಿ ಹೋಗಬೇಕಾದರೆ ಮಣ್ಣಿನ ರಸ್ತೆಯಲ್ಲೇ ಸಾಗಬೇಕು. ಯಾರನ್ನಾದರೂ ಆಸ್ಪತ್ರೆಗೆ ಸಾಗಿಸಬೇಕೆಂದರೆ ಸರಿಯಾದ ಸಮಯಕ್ಕೆ ಹೋಗಲಾಗುವುದಿಲ್ಲ. ಈ ದಾರಿಗಳಲ್ಲಿ ಕೇವಲ ಜೀಪುಗಳು ಮಾತ್ರ ಸಂಚರಿಸುತ್ತಿವೆ. ಬೇರೆ ವಾಹನಗಳು ಸಂಚರಿಸಲಾರವು.
Advertisement
ಗ್ರಾಮಸ್ಥರ ಹಿಡಿಶಾಪ: 2013 ರಲ್ಲಿ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಭರವಸೆಯನ್ನು ನೀಡಿತ್ತು. ಆದರೆ ಈವರೆಗೂ ಇಲ್ಲಿ ಶಿಶು ಮರಣಗಳನ್ನು ತಡೆಯಲಾಗಿಲ್ಲ. ಮಳೆಯಾಗಿ ಪ್ರವಾಹ ಬಂದರೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ. ಎಷ್ಟು ಬಾರಿ ನಾವು ಸಮಸ್ಯೆಯನ್ನು ಬಗೆ ಹರಿಸಿ ಎಂದು ಕೇಳಿಕೊಂಡರೂ ನಮ್ಮ ಮನವಿಯನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.