– ವಿದ್ಯಾರ್ಥಿಗಳ ಪರದಾಟ
ಬೆಂಗಳೂರು: ವಿದ್ಯಾರ್ಥಿಗಳು ನೆಮ್ಮದಿಯಿಂದ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದ (BCM Hostel) ಹಾಸ್ಟೆಲ್‌ನ ಕೆಳ ಮಹಡಿಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿರುವ ಘಟನೆ ಬೆಂಗಳೂರಿನ (Bengaluru) ಕೆ.ಆರ್ ಪುರಂ (KR Puram)ನಲ್ಲಿ ಬೆಳಕಿಗೆ ಬಂದಿದೆ.
ಕೆ.ಆರ್ ಪುರಂನ ಅವಲಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ (BCW 2585) ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೇ ಕಟ್ಟಡದ ನೆಲ ಮಹಡಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇದ್ದರೆ, ಮೇಲಿನ ಮಹಡಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದಾರೆ.
ಹಾಸ್ಟೆಲ್ ಕಳೆದ ಎರಡು ವರ್ಷಗಳಿಂದ ಇದೇ ಕಟ್ಟಡದಲ್ಲಿದೆ. ಮೂರು ತಿಂಗಳ ಹಿಂದೆ ನೆಲ ಮಹಡಿಯಲ್ಲಿ ಬಾರ್ ಆರಂಭವಾಗಿದೆ. ಅಂದಿನಿಂದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಹಗಲು-ರಾತ್ರಿ ಬಾರ್‌ಗೆ ಬರುವ ಜನರ ಗದ್ದಲ, ಗಲಾಟೆಯಿಂದ ವಿದ್ಯಾರ್ಥಿಗಳ ಓದು ಮತ್ತು ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಓದಲು ಸೂಕ್ತ ವಾತಾವರಣ ಇಲ್ಲದ ಕಾರಣ ಹಾಸ್ಟೆಲ್‌ನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನೂ ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.ಇದನ್ನೂ ಓದಿ: ಮಣಿಪಾಲ್ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್ – ವಿದ್ಯಾರ್ಥಿ ತಲೆಗೆ ಗಂಭೀರ ಗಾಯ
ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಹಾಸ್ಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ನ ಮೇಲೆಯೇ ನಡೆಯುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.ಇದನ್ನೂ ಓದಿ: ಜಾಮೀನು ತಿರಸ್ಕರಿಸಿದರೆ ಮುಂದಿನ ಟಾರ್ಗೆಟ್ ನೀನೇ – ಚಾ.ನಗರ ಜಡ್ಜ್‌ಗೆ ಜೀವ ಬೆದರಿಕೆ
