ಮುಂಬೈ: ಯಾವ ಬಂಧನದಲ್ಲಿಯೂ ನಾವಿಲ್ಲ. ಎಲ್ಲರೂ ಫ್ರೀಯಾಗಿ ಇದ್ದೀವಿ. ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನಮ್ಮನ್ನು ಬಂಧನ ಮಾಡುವವರು ಯಾರು ಇಲ್ಲ ಎಂದು ಬಿ.ಸಿ ಪಾಟೀಲ್ ಮುಂಬೈ ಹೋಟೆಲ್‍ನಲ್ಲಿ ಹೇಳಿದರು.
ಹೋಟೆಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರಲ್ಲಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಆಸೆ, ಆಮಿಷಗಳು ಬಂದಾಗ ಬಲಿಯಾಗಲಿಲ್ಲ. ಇಂದು ಬಲಿಯಾಗುವ ಅವಶ್ಯಕತೆ ನಮಗೆ ಯಾರಿಗೂ ಇಲ್ಲ. ಯಾವ ಬಂಧನದಲ್ಲಿಯೂ ಇಲ್ಲ. ಎಲ್ಲರೂ ಫ್ರೀಯಾಗಿ ಇದ್ದೇವೆ. ನಾವು ಬಂಧನ ಮಾಡಿದ ಜನರು. ನಮ್ಮನ್ನು ಬಂಧನ ಮಾಡುವವರು ಯಾರು ಇಲ್ಲ. ನಾವು ಬಹಳ ಸ್ವತಂತ್ರವಾಗಿದ್ದೇವೆ. ಸಮಾನ ಮನಸ್ಥಿತಿಯವರು ರಾಜೀನಾಮೆ ಕೊಟ್ಟಿದ್ದೇವೆ. ಒಬ್ಬೊಬ್ಬರಿದ್ದರೆ ಬೇರೆ ಬೇರೆ ರೀತಿಯಲ್ಲಿ ವಿಷಯಗಳನ್ನು ಹರಡಿಸಿ ಅದರ ಉಪಯೋಗವನ್ನು ಪಡೆದುಕೊಳ್ಳುಲು ಪ್ರಯತ್ನ ಮಾಡುತ್ತಾರೆ ಎಂದು ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂದು ತಿಳಿಸಿದರು.
Advertisement
Advertisement
ಸಿದ್ದರಾಮಯ್ಯ ಅವರು ಅನರ್ಹಗೊಳಿಸುವಂತೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ಕೊಡುವುದು ಅವರ ಕರ್ತವ್ಯ. ತೀರ್ಮಾನ ಮಾಡುವುದು ಸ್ಪೀಕರ್. ಅವರು ನ್ಯಾಯಾಲಯದಲ್ಲಿ ನ್ಯಾಯಾಧೀಶರಿದ್ದಂತೆ. ಹೀಗಾಗಿ ಅವರು ಆಗುಹೋಗುಗಳನ್ನು ತಿಳಿದು ತೀರ್ಮಾನ ತೆಗೆದುಕೊಳ್ಳುತ್ತಾರೆ. ದೂರು ಕೊಟ್ಟ ತಕ್ಷಣ ಅದೇ ಫೈನಲ್ ಅಲ್ಲ. ಅನರ್ಹಗೊಳಿಸುವಂತಹ ಯಾವುದೇ ಕೆಲಸ ಮಾಡಿಲ್ಲ. ಯಾವುದೇ ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ. ನಾವು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ರಾಜೀನಾಮೆ ಕೊಟ್ಟಿದ ತಕ್ಷಣ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಹೀಗಾಗಿ ಅನರ್ಹ ಮಾಡುವಂತಹ ಕಾರಣವೂ ಅಲ್ಲ ಎಂದು ಹೇಳಿ ಮಾಜಿ ಸಿಎಂಗೆ ತಿರುಗೇಟು ಕೊಟ್ಟರು.
Advertisement
Advertisement
ನಮಗೆ ಸ್ಪೀಕರ್ ಮೇಲೆ ಬಹಳ ನಂಬಿಕೆಯಿದೆ. ಅವರು ಬಹಳ ಬುದ್ಧಿವಂತರಾಗಿದ್ದು, ಕಾನೂನನ್ನು ಅರೆದು ಕುಡಿದಿದ್ದಾರೆ. ಹೀಗಾಗಿ ಸ್ಪೀಕರ್ ಅವರು ಕಾನೂನಿನ ಚೌಕಟ್ಟಿನಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ನಮಗೆ ಇದೆ. ಒಂದು ವೇಳೆ ಸ್ಪೀಕರ್ ನೀವೆಲ್ಲರೂ ಬಂದು ಹಾಜರಾಗಬೇಕು ಎಂದು ಕರೆ ಮಾಡಿದರೆ, ತಕ್ಷಣ ನಾವು ಅವರ ಮುಂದೆ ಹಾಜರಾಗಿ ಹೇಳಿಕೆ ಕೊಡುತ್ತೇವೆ ಎಂದು ಪಾಟೀಲ್ ತಿಳಿಸಿದರು.
ಯಾರು ಯಾರನ್ನು ಹಿಡಿದಿಡಲು ಆಗಲ್ಲ. ಎಲ್ಲರೂ ಸ್ವತಂತ್ರವಾಗಿದ್ದೀವಿ. ಇಲ್ಲಿ ಯಾರು ಶಾಲೆ ಮಕ್ಕಳಲ್ಲ. ನಾವೆಲ್ಲ ಜವಾಬ್ದಾರಿ ಸ್ಥಾನದಲ್ಲಿದ್ದವರು. 3 ಬಾರಿ ಶಾಸಕರಾಗಿರುವವರು. ವಿಶೇಷವಾಗಿ ನಾನು 25 ವರ್ಷದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವನು. ಹೀಗಾಗಿ ನಾವು ಯಾರ ಒತ್ತಡದಲ್ಲಿಯೂ ಇಲ್ಲ. ಸ್ವ-ಇಚ್ಚೆಯಿಂದ ಬಂದಿದ್ದೇವೆ ಎಂದರು.
ನಮ್ಮ ಕ್ಷೇತ್ರದ ಜನತೆ ನನ್ನ ನಡೆಯನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅದರಲ್ಲೂ ಹಾವೇರಿ ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಉತ್ತರ ಕರ್ನಾಟಕ, ತಾಲೂಕಿಗೆ ಅನ್ಯಾಯ ಮಾಡಿದರು. ಬಿ.ಸಿ.ಪಾಟೀಲ್ ಅವರ ನಿರ್ಧಾರ ಸರಿಯಾಗಿದೆ ಎಂದು ನಮ್ಮ ಕ್ಷೇತ್ರದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ನಮ್ಮ ಜೊತೆ ಜನರು ಇದ್ದಾರೆ. ಅವರ ಜೊತೆ ನಾವಿದ್ದೇವೆ. ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಬಿ.ಸಿ. ಪಾಟೀಲ್ ಹೇಳಿದರು.