ಬೆಂಗಳೂರು: ಈದ್ಗಾ ವಿವಾದದ ಬಗ್ಗೆ ವರ್ಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾ ಮಾಡಿದ್ದು, ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಈ ಹಿಂದೆ ಚಾಮರಾಜಪೇಟೆ ಆಟದ ಮೈದಾನವನ್ನು ವರ್ಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಈ ಅರ್ಜಿಯನ್ನು ವಜಾಗೊಳಿಸಿದ್ದು, ಬಿಬಿಎಂಪಿ ದಾಖಲೆಗಳಲ್ಲಿ ಈ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಸ್ತಿಯೆಂದು ನಮೂದಿಸಲು ಸೂಚನೆ ನೀಡಿದೆ. ವರ್ಕ್ಫ್ ಬೋರ್ಡ್ ಆಸ್ತಿಯ ಬಗ್ಗೆ ಹಕ್ಕು ಸ್ಥಾಪಿಸಬೇಕಿದ್ದಲ್ಲಿ ಕಂದಾಯ ಇಲಾಖೆ ಬಳಿ ವ್ಯವಹರಿಸಬೇಕು ಎಂದು ತಿಳಿಸಿದರು.
ಈದ್ಗಾ ಮೈದಾನಕ್ಕೂ ವಕ್ಫ್ ಬೋರ್ಡ್‌ಗೂ ಯಾವುದೇ ಸಂಬಂಧ ಇಲ್ಲ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ ಅವರು, ವಕ್ಫ್ ಬೋರ್ಡ್ ಹಕ್ಕು ಸಾಧಿಸಲು ಯಾವುದೇ ದಾಖಲೆ ಇಲ್ಲ. ಇದರಿಂದಾಗಿ ಈ ಆಟದ ಮೈದಾನವನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲು ಬಿಬಿಎಂಪಿ ಸೂಚನೆ ನೀಡಿದೆ. ಇಡೀ ಆಟದ ಮೈದಾನ ಇನ್ಮುಂದೆ ಕಂದಾಯ ಇಲಾಖೆಗೆ ಸೇರಿದ ಆಸ್ತಿಯಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ
ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ವತ್ತು ಎಂದು ಆದೇಶ ಹಿನ್ನೆಲೆಯಲ್ಲಿ ಚಾಮರಾಜಪೇಟೆ ನಾಗರಿಕರ ವೇದಿಕೆಯಿಂದ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ವಿಚಾರವಾಗಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಸಂಚಾಲಕ ಮಾತನಾಡಿ, ಚಾಮರಾಜಪೇಟೆಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಸರ್ಕಾರದ ಆದೇಶ ಹರ್ಷ ತಂದಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಈದ್ಗಾ ಮೈದಾನದಲ್ಲಿ ಆಚರಣೆ ಮಾಡಲಾಗುತ್ತೆ. ಈ ಆದೇಶ ಚಾಮರಾಜಪೇಟೆಯ ಜನರ ಗೆಲುವಾಗಿದೆ ಎಂದ ಅವರು, 10ನೇ ನಾಲ್ವಡಿ ಕೃಷ್ಣರಾಜ ಒಡೆಯರ ಆಟದ ಮೈದಾನ ಎಂದು ಹೆಸರು ಇಡುವಂತೆ ಒತ್ತಾಯ ಮಾಡಿದರು. ಇದನ್ನೂ ಓದಿ: ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ