ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2 ಮೀಸಲಾತಿ: ಬೊಮ್ಮಾಯಿ

Public TV
3 Min Read
basavaraj bommai

ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2ರ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್‍ಗೆ ಚಾಲನೆ ನೀಡಿ 2020ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

basavaraj bommai 2

ಮುಂದಿನ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. ಕಬ್ಬಡಿ, ಖೋಖೋ, ಕಂಬಳ, ಎತ್ತಿನಗಾಡಿ ಸ್ಪರ್ಧೆ, ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸೂಚಿಸುತ್ತದೆ. ಗ್ರಾಮಪಂಚಾಯತಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.

ಯುವಜನ ಸಬಲೀಕರಣಕ್ಕಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಬಹಳ ಮುಖ್ಯ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆಗಸ್ಟ್ 15ಕ್ಕೆ ಚಾಲನೆ ನೀಡಲಾಗಿದೆ. ಪ್ರತಿಗ್ರಾಮದಲ್ಲಿ 30 ಜನರ ಯುವಜನರ ಸಂಘವನ್ನು ಗುರುತಿಸಿ, 7.5 ಲಕ್ಷದಿಂದ 10 ಲಕ್ಷದವರೆಗೆ ಯೋಜನೆಗಳನ್ನು ನೀಡಿ, ಸಂಘಕ್ಕೆ 1.5 ಲಕ್ಷದ ಅನುದಾನವನ್ನು ಸರ್ಕಾರವೇ ಭರಿಸಿ, ಉತ್ಪನ್ನಗಳ ತಯಾರಿಕೆಗೆ ತರಬೇತಿ, ತಯಾರಿಕೆ ಹಾಗೂ ಮಾರುಕಟ್ಟೆ ಜೋಡಣೆಯನ್ನು ಕಲ್ಪಿಸುವ ಯೋಜನೆಯಾಗಿದೆ. ಸ್ವಯಂಉದ್ಯೋಗ ಮಾಡಿ ಇತರರಿಗೆ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಇದು ವಿನೂತನವಾದ ಯೋಜನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡುತ್ತದೆ ಎಂದರು.

independence day basavaraj bommai

ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್, ಮೋಟರ್ ಸೈಕಲ್, ಕಾರ್ ರ‍್ಯಾಲಿಗಳು, ಗಾಲ್ಫ್, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡದ ಯುವಕರು ಯಶಸ್ಸಿನ ಉತ್ತುಂಗಕ್ಕೆ ಏರಬೇಕು. ಸೀನಿಯರ್ ಒಲಂಪಿಕ್ಸ್ ಏರ್ಪಡಿಸಲು ರಾಜ್ಯ ಸರ್ಕಾರ 8 ಕೋಟಿ ರೂ.ಗಳನ್ನು ನೀಡಿದೆ. ಕರ್ನಾಟಕವನ್ನು ಕ್ರೀಡಾ ಕರ್ನಾಟಕವನ್ನಾಗಿ ಮಾಡುವ ಗುರಿ ರಾಜ್ಯ ಸರ್ಕಾರಕ್ಕಿದೆ. ಕ್ರೀಡೆಯ ತರಬೇತುದಾರರಿಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ, ಇದು ವಚನ ವಂಚನೆ: ಸಿದ್ದರಾಮಯ್ಯ

ಧ್ಯಾನ್ ಚಂದ್ ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಕೀರ್ತಿ ತಂದವರು. ಹಾಕಿಯ ಜಾದೂಗಾರರಾಗಿದ್ದ ಅವರು ಹಾಕಿಯನ್ನು ಅಗ್ರಮಾನ್ಯ ಸ್ಥಾನಕ್ಕೆ ತಂದವರು. ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಖೇಲ್‍ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ನೀಡಲಾಗುವ ಏಕಲವ್ಯ ಪ್ರಶಸ್ತಿ, ಕ್ರೀಡಾರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾಕ್ಷೇತ್ರದಲ್ಲಿನ ತಮ್ಮ ಶ್ರಮ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ನಿಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಭಾರತದಲ್ಲಿ ಶೇ. 46ರಷ್ಟು ಜನಸಂಖ್ಯೆ ಯುವಜನರಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಭವಿಷ್ಯ ಈ ಯುವಜನತೆಯ ಮೇಲಿದೆ ಎಂದು ತಿಳಿಸಿದರು.

BASAVARAJ BOMMAI 5

ಯುವಕರಲ್ಲಿ ಶಿಸ್ತು, ವ್ಯಕ್ತಿತ್ವದಿಂದ ಯಶಸ್ಸು ಬರುತ್ತದೆ. ಕಠಿಣ ಪರಿಶ್ರಮಗಳಿಂದ ಹೆಚ್ಚಿನ ಗುರಿಗಳನ್ನು ಸಾಧಿಸುತ್ತಿರಬೇಕು. ಗೆಲ್ಲಬೇಕೆಂದು ಆಡಬೇಕೇ ಹೊರತು ಸೋಲಬಾರದು ಎಂದು ಆಟವಾಡಬಾರದು. ಗೆಲ್ಲಬೇಕೆಂಬ ಹುರುಪಿನಿಂದ ಸಕಾರಾತ್ಮಕವಾಗಿ ಆಡಬೇಕು ಆತ್ಮವಿಶ್ವಾಸದಿಂದ ನಿಮ್ಮ ಮೇಲೆ ನಂಬಿಕೆಯಿರಿಸಿ. ಯುವಕರು ಸಾಧನೆಗಳನ್ನು ಮಾಡಿದಾಗ ಹುರಿದುಂಬಿಸಿದರೆ, ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್, ಹಿಮಾಲಯದ ತಪ್ಪಲಿನಲ್ಲಿ ಕುರಿ ಕಾಯುವವರ ಜನಾಂಗದಲ್ಲಿ ಕುರಿ ಕಾಯುತ್ತಿದ್ದ ಸಣ್ಣ ಹುಡುಗ ತೇನ್ ಸಿಂಗ್, ತನ್ನ 42ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್‍ನ್ನು ಹತ್ತಿ ಭಾರತದ ಧ್ವಜವನ್ನು ನೆಟ್ಟ ಕೀರ್ತಿ ಅವರದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಂಕಲ್ಪವನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಯಶ ಸಾಧಿಸಲು ಮೊದಲು ಧೃಡ ನಿಶ್ಚಯ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳು ಯುವಕರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ: ಸಿ.ಟಿ ರವಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *