ಢಾಕಾ: ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾಗವಹಿಸಲು ನಮ್ಮ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಹೇಳಿದೆ.
ಭಾರತಕ್ಕೆ ತಂಡವನ್ನು ಕಳುಹಿಸುವ ಬಗ್ಗೆ ಮುಂದಿನ 24 ಗಂಟೆಯ ಒಳಗಡೆ ತಮ್ಮ ನಿರ್ಧಾರವನ್ನು ತಿಳಿಸಬೇಕೆಂದು ಐಸಿಸಿ (ICC) ಬಾಂಗ್ಲಾದೇಶಕ್ಕೆ ಕೊನೆಯ ಡೆಡ್‌ಲೈನ್ ವಿಧಿಸಿತ್ತು. ಈ ಡೆಡ್‌ಲೈನ್ ಒಳಗಡೆ ಪ್ರತಿಕ್ರಿಯಿಸಿದ ಬಾಂಗ್ಲಾ ಈಗ ತನ್ನ ನಿರ್ಧಾರವನ್ನು ತಿಳಿಸಿದೆ.
ಭಾರತ ನೆಲದಲ್ಲಿ ಟಿ20 ವಿಶ್ವಕಪ್ ಪಂದ್ಯ ಆಡಲು ಒಪ್ಪದ ಬಾಂಗ್ಲಾದೇಶಕ್ಕೆ ಬುಧವಾರ ಐಸಿಸಿ ಶಾಕ್ ನೀಡಿತ್ತು. ಬಾಂಗ್ಲಾ ಬದಲು ಬೇರೊಂದು ತಂಡಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಮತದಾನ ನಡೆದಿತ್ತು. ಪಾಕಿಸ್ತಾನ ಮತ್ತು ಬಾಂಗ್ಲಾ ಹೊರತು ಪಡಿಸಿ ಉಳಿದ 14 ದೇಶಗಳು ಬೇರೆ ತಂಡವನ್ನು ಆಡಿಸಲು ಒಪ್ಪಿಗೆ ನೀಡಿತ್ತು. ಇದನ್ನೂ ಓದಿ: ಚಿನ್ನಸ್ವಾಮಿಗೆ 4 ಕೋಟಿ ವೆಚ್ಚದಲ್ಲಿ ಆರ್‌ಸಿಬಿಯಿಂದ 350 AI ಕ್ಯಾಮೆರಾ – ಬೆಂಗಳೂರಿನಲ್ಲೇ ಪಂದ್ಯ?
ಸುರಕ್ಷತೆ ಮತ್ತು ಭದ್ರತಾ ಕಾರಣದಿಂದಾಗಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ. ಬೇರೆ ದೇಶದಲ್ಲಿ ನಮ್ಮ ತಂಡವನ್ನು ಆಡಿಸುವಂತೆ ಐಸಿಸಿಯನ್ನು ಕೇಳಿಕೊಂಡಿತ್ತು. ಈಗಾಗಲೇ ಪಂದ್ಯದ ವೇಳಾಪಟ್ಟಿ, ಹೋಟೆಲ್, ಸ್ಥಳಗಳನ್ನು ಅಂತಿಮಗೊಳಿಸಲಾಗಿದ್ದು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಐಸಿಸಿ ಖಡಕ್ ಆಗಿ ಹೇಳಿತ್ತು.
ಈ ಮಧ್ಯೆ ಬಾಂಗ್ಲಾವನ್ನು ಬೆಂಬಲಿಸಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿಗೆ ಪತ್ರ ಬರೆದಿತ್ತು. ಶ್ರೀಲಂಕಾದಲ್ಲಿ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಬಾಂಗ್ಲಾದೇಶದ ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಡಿಸಲು ನಾವು ಸಿದ್ಧವಿದ್ದೇವೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪತ್ರ ಬರೆದಿದ್ದರು.
ಭಾರತ ಮತ್ತು ಶ್ರೀಲಂಕಾ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಜಾರಿಯಲ್ಲಿರುವ ಬಿಸಿಸಿಐ ಮತ್ತು ಪಿಸಿಬಿ ನಡುವಿನ ‘ಹೈಬ್ರಿಡ್ ಮಾದರಿ’ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.


