ಭಾರತೀಯ ಸೇನೆ ತನ್ನ ಸಮವಸ್ತ್ರ ಹಾಗೂ ಉಡುಪು ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ. ಸುಮಾರು ಎಂಟು ವರ್ಷಗಳ ಬಳಿಕ ಪರಿಷ್ಕೃತಗೊಂಡಿರುವ ʼಆರ್ಮಿ ಯೂನಿಫಾರ್ಮ್ಸ್-2026ʼ ಕೈಪಿಡಿಯು ಸೇನೆಯ ಉಡುಪು ಸಂಸ್ಕೃತಿಯಲ್ಲಿ ಹಲವು ಹೊಸ ಅಂಶಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳು ಕೇವಲ ಉಡುಪಿನ ಮಟ್ಟಕ್ಕೆ ಸೀಮಿತವಾಗದೆ, ಭಾರತೀಯ ಸೇನೆಯ ಗುರುತು ಮತ್ತು ಪರಂಪರೆಯ ಮೇಲೆಯೂ ಪರಿಣಾಮ ಬೀರುವಂತಿವೆ.
ಹೊಸ ನಿಯಮಾವಳಿಯ ಪ್ರಮುಖ ಉದ್ದೇಶ ಬ್ರಿಟಿಷ್ ವಸಾಹತುಶಾಹಿ ಕಾಲದಿಂದ ಉಳಿದುಕೊಂಡಿರುವ ಕೆಲವು ಸಂಪ್ರದಾಯಗಳನ್ನು ತೆಗೆದುಹಾಕಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚು ಪ್ರತಿಬಿಂಬಿಸುವಂತೆಯಾಗಿದೆ. ಸ್ವಾತಂತ್ರ್ಯದ ಅಮೃತಕಾಲದ ಹಿನ್ನೆಲೆಯಲ್ಲಿ ಸೇನೆಯ ಉಡುಪಿನಲ್ಲಿಯೂ ಭಾರತೀಯತೆಯ ಸ್ಪರ್ಶವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ರೆ ಭಾರತೀಯ ಸೇನೆಯ ಹೊಸ ಸಮವಸ್ತ್ರ ನಿಯಮಾವಳಿಯಲ್ಲಿ ಏನಿದೆ? ಹೊಸ ಡ್ರೆಸ್ ಕೋಡ್ ಏನೆಲ್ಲಾ ಒಳಗೊಂಡಿದೆ? ಬ್ರಿಟಿಷರ ಕಾಲದಲ್ಲಿದ್ದ ಯಾವೆಲ್ಲಾ ಸಂಪ್ರದಾಯಗಳೀಗೆ ಅಂತ್ಯ ಹಾಡಲಾಗಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಬ್ರಿಟಿಷ್ ಸಂಪ್ರದಾಯಗಳಿಗೆ ಗುಡ್ ಬೈ:
ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಬ್ರಿಟಿಷ್ ಸೇನಾ ಸಂಪ್ರದಾಯಗಳ ಪ್ರಭಾವ ಮುಂದುವರಿದಿತ್ತು. ಆದರೆ ಇದೀಗ ಸೇನೆ ತನ್ನ ಸ್ವಂತ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇದು ಕೇವಲ ಉಡುಪು ಬದಲಾವಣೆಯಲ್ಲ, ಮನೋಭಾವ ಮತ್ತು ಪರಂಪರೆಯ ಬದಲಾವಣೆಯೂ ಆಗಿದೆ.
ಹೊಸ ನಿಯಮಾವಳಿಯ ಪ್ರಮುಖ ಅಂಶವೆಂದರೆ ʼರಾಯಲ್ʼ ಎಂಬ ಪದದ ಬಳಕೆಗೆ ಅಂತ್ಯ ಹಾಡಿರುವುದು. ಬ್ರಿಟಿಷ್ ರಾಜಮನೆತನದ ಪ್ರಭಾವವನ್ನು ಪ್ರತಿಬಿಂಬಿಸುವ ಈ ಪದವನ್ನು ಅಧಿಕೃತ ಬಳಕೆಯಿಂದ ತೆಗೆದುಹಾಕಲಾಗಿದೆ. ಭಾರತೀಯ ಸೇನೆ ತನ್ನದೇ ಆದ ಸ್ವತಂತ್ರ ಗುರುತನ್ನು ಹೊಂದಿದೆ ಎಂಬ ಸಂದೇಶವನ್ನು ಇದು ಸಾರುತ್ತದೆ.
ಬಂಡಿ ಜಾಕೆಟ್ ಸೇರ್ಪಡೆ:
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಂಡಿ ಜಾಕೆಟ್ ಅನ್ನು ಸೇನಾ ಉಡುಪಿನ ಭಾಗವನ್ನಾಗಿ ಮಾಡಿರುವುದು ಮತ್ತೊಂದು ಮಹತ್ವದ ಬದಲಾವಣೆ. ಅಧಿಕಾರಿಗಳು ಅಧಿಕೃತ ಕಾರ್ಯಕ್ರಮಗಳಲ್ಲಿ ಈ ಜಾಕೆಟ್ ಧರಿಸಬಹುದಾಗಿದೆ. ಇದು ಭಾರತೀಯ ಪರಂಪರೆಯನ್ನು ಸೇನಾ ಉಡುಪಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಿದೆ.
ಸೇನೆಯ ವಿವಿಧ ಘಟಕಗಳ ತಲೆ ಉಡುಪು ಮತ್ತು ಬೆರೆಟ್ ಧಾರಣೆಯ ಕುರಿತ ನಿಯಮಗಳನ್ನು ಸಹ ಹೊಸದಾಗಿ ಪರಿಷ್ಕರಿಸಲಾಗಿದೆ. ಪ್ರತಿಯೊಂದು ಘಟಕದ ಪರಂಪರೆಯನ್ನು ಗೌರವಿಸುತ್ತಲೇ ವೃತ್ತಿಪರತೆ ಮತ್ತು ಏಕರೂಪತೆಗೆ ಆದ್ಯತೆ ನೀಡಲಾಗಿದೆ.
ಸೇನೆಯ ಚಳಿಗಾಲದ ಉಡುಪಿನಲ್ಲಿಯೂ ಬದಲಾವಣೆ ತರಲಾಗಿದೆ. ʼಡ್ರೆಸ್ 3ಬಿʼ ಎಂಬ ಹೊಸ ಚಳಿಗಾಲದ ಸಮವಸ್ತ್ರವನ್ನು ಎಲ್ಲಾ ಹುದ್ದೆಗಳ ಸಿಬ್ಬಂದಿಗೆ ಪರಿಚಯಿಸಲಾಗಿದೆ. ಈ ಉಡುಪು ಹೆಚ್ಚು ಆರಾಮದಾಯಕವಾಗಿದ್ದು, ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಪರೇಡ್‌ನಲ್ಲಿ ಕತ್ತಿ ಬಳಕೆ ಸೀಮಿತ:
ಅದೇ ರೀತಿ, ಹಲವು ಔಪಚಾರಿಕ ಸಮಾರಂಭಗಳಲ್ಲಿ ಕಡ್ಡಾಯವಾಗಿದ್ದ ಕೆಲವು ಬ್ರಿಟಿಷ್ ಸಂಪ್ರದಾಯಗಳನ್ನು ಸಹ ರದ್ದುಗೊಳಿಸಲಾಗಿದೆ. ವಿಶೇಷವಾಗಿ ಪರೇಡ್‌ಗಳಲ್ಲಿ ಹಿರಿಯ ಅಧಿಕಾರಿಗಳು ಕತ್ತಿ ಹಿಡಿದು ಭಾಗವಹಿಸುವ ಪದ್ಧತಿಯನ್ನು ಈಗ ಸೀಮಿತಗೊಳಿಸಲಾಗಿದೆ. ಕತ್ತಿಯ ಬಳಕೆ ಕೆಲವು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಲಿದೆ.
ಮಹಿಳೆಯರ ಉಡುಪಿನಲ್ಲೂ ಬದಲಾವಣೆ:
ಮಹಿಳಾ ಅಧಿಕಾರಿಗಳ ಉಡುಪು ಆಯ್ಕೆಗಳಲ್ಲಿಯೂ ಕೆಲವು ಹೊಸ ಅವಕಾಶಗಳನ್ನು ಒದಗಿಸಲಾಗಿದೆ. ಕೆಲವು ಅಧಿಕೃತ ಸಂದರ್ಭಗಳಲ್ಲಿ ಅವರು ಸೀರೆ ಅಥವಾ ಭಾರತೀಯ ಶೈಲಿಯ ಉಡುಪುಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಇದು ಸೇನೆಯಲ್ಲಿ ಮಹಿಳೆಯರ ಪಾತ್ರ ಮತ್ತು ವೈವಿಧ್ಯತೆಯನ್ನು ಗೌರವಿಸುವ ಕ್ರಮವೆಂದು ಪರಿಗಣಿಸಲಾಗಿದೆ.
ಮಹಿಳೆಯರು ಸೌಮ್ಯ ಬಣ್ಣದ ಸೀರೆ, ಅಥವಾ ಕುರ್ತಾ-ಸಲ್ವಾರ್ ಹಾಗೂ ಪಾದದವರೆಗೆ ಬರುವ ನೇರ ಮಾದರಿಯ ಪ್ಯಾಂಟ್ ಜೊತೆಗೆ ದುಪಟ್ಟಾವನ್ನು ಧರಿಸಬಹುದು. ಆದರೆ ಸ್ಲೀವ್‌ಲೆಸ್ ಕುರ್ತಾಗಳು, ಪಲಾಜೋ ಪ್ಯಾಂಟ್‌ಗಳು ಮತ್ತು ಸಿಗರೇಟ್ ಪ್ಯಾಂಟ್‌ಗಳಂತಹ ಕ್ಯಾಶುಯಲ್ ಉಡುಪುಗಳಿಗೆ ನಿರ್ಬಂಧ ಹೇರಲಾಗಿದೆ.
ಸೈನಿಕರ ವೈಯಕ್ತಿಕ ಅಂದ ಮತ್ತು ಶಿಸ್ತಿನ ಕುರಿತ ನಿಯಮಗಳನ್ನೂ ಸ್ಪಷ್ಟಗೊಳಿಸಲಾಗಿದೆ. ಕೂದಲು, ಮೀಸೆ, ಟ್ಯಾಟೂ ಮತ್ತು ಇತರ ದೇಹದ ಅಲಂಕಾರಗಳ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸೇನೆಯ ವೃತ್ತಿಪರತೆ ಮತ್ತು ಶಿಸ್ತನ್ನು ಕಾಪಾಡುವುದು ಇದರ ಉದ್ದೇಶವಾಗಿದೆ.
ಮೀಸೆ ಹೊಂದಿರುವ ಸೈನಿಕರ ಮೀಸೆಯ ಉದ್ದವು 12 ಸೆಂ.ಮೀ.ಗಿಂತ ಹೆಚ್ಚಿರಬಾರದು. ಸಮವಸ್ತ್ರ ಧರಿಸಿದಾಗ ಡಿಯೋಡರೆಂಟ್ ಮತ್ತು ಸುಗಂಧ ದ್ರವ್ಯಗಳನ್ನು ಬಳಸುವುದಕ್ಕೂ ಅವಕಾಶ ಇಲ್ಲ. ಆದರೆ ಆಫ್ಟರ್ ಶೇವ್ ಲೋಷನ್ ಬಳಸಬಹುದು.
ಮಹಿಳಾ ಸಿಬ್ಬಂದಿಗೆ ಲಿಪ್‌ಸ್ಟಿಕ್, ಬಣ್ಣದ ನೇಲ್ ಪಾಲಿಶ್, ಬಿಂದಿ ಹಾಗೂ ಮೂಗಿನ ಉಂಗುರ ಧರಿಸುವುದನ್ನು ನಿಷೇಧಿಸಲಾಗಿದೆ. ವಿವಾಹಿತ ಮಹಿಳೆಯರು ಸಿಂಧೂರ ಧರಿಸಬಹುದಾದರೂ ಅದು ಬೆರೆಟ್ ಅಥವಾ ಕ್ಯಾಪ್ ಕೆಳಗಿನಿಂದ ಕಾಣಿಸಬಾರದು. ಸಮವಸ್ತ್ರದಲ್ಲಿರುವಾಗ ಯಾವುದೇ ರೀತಿಯ ಬ್ರೇಸ್ಲೆಟ್ ಧರಿಸಲು ಅವಕಾಶವಿಲ್ಲ. ಪೂಜೆಯ ದಿನ ಮಾತ್ರ ಕೈಗೆ ಒಂದೇ ಒಂದು ಪವಿತ್ರ ದಾರವನ್ನು ಧರಿಸಲು ಅನುಮತಿ ನೀಡಲಾಗಿದೆ. ಸಿಖ್ ಸೈನಿಕರನ್ನು ಹೊರತುಪಡಿಸಿ ಇತರರು ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಬಾರದು.
ಈ ಬದಲಾವಣೆಗಳು ಪ್ರಧಾನಿ ನರೇಂದ್ರ ಮೋದಿ ಅವರ ʼವಸಾಹತುಶಾಹಿ ಮನೋಭಾವದಿಂದ ಮುಕ್ತಿʼ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇಶದ ವಿವಿಧ ಸಂಸ್ಥೆಗಳು ಬ್ರಿಟಿಷ್ ಕಾಲದ ಪರಂಪರೆಗಳನ್ನು ಮರುಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಸೇನೆಯ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ರಕ್ಷಣಾ ತಜ್ಞರ ಪ್ರಕಾರ, ಹೊಸ ನಿಯಮಾವಳಿಯು ಸೈನಿಕರಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸಲಿದೆ. ಭಾರತೀಯ ಸಂಸ್ಕೃತಿ ಮತ್ತು ಸೇನಾ ಪರಂಪರೆಯ ಸಮನ್ವಯಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಒಟ್ಟಾರೆ, ಭಾರತೀಯ ಸೇನೆಯ ಹೊಸ ಸಮವಸ್ತ್ರ ನಿಯಮಾವಳಿ ಭಾರತೀಯತೆ, ಶಿಸ್ತು ಮತ್ತು ಆಧುನಿಕತೆಯ ಸಮನ್ವಯವನ್ನು ಪ್ರತಿಬಿಂಬಿಸುವ ಮಹತ್ವದ ಹೆಜ್ಜೆಯಾಗಿದೆ. ಬಂಡಿ ಜಾಕೆಟ್‌ಗಳ ಸೇರ್ಪಡೆ, ವಸಾಹತುಶಾಹಿ ಪರಂಪರೆಗಳ ನಿವಾರಣೆ ಹಾಗೂ ಹೊಸ ಉಡುಪು ಮಾರ್ಗಸೂಚಿಗಳ ಮೂಲಕ ಭಾರತೀಯ ಸೇನೆ ತನ್ನ ವಿಶಿಷ್ಟ ಗುರುತನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
