ಬಳ್ಳಾರಿ: ಕೃಷಿ ಪಂಪ್ಸೆಟ್ಗಳಿಗೆ ನಿರಂತರ 12 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ, ತಾಲೂಕಿನ ಸಿರಗೇರಿ ಪಟ್ಟಣದ ಜೆಸ್ಕಾಂ (GESCOM) ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು(Farmers) ಮಂಗಳವಾರ ಬೃಹತ್ ಪ್ರತಿಭಟನೆ(Protest) ನಡೆಸಿದರು.
ಕಚೇರಿಯ ಮುಖ್ಯದ್ವಾರದ ಮುಂದೆ ಜಮಾಯಿಸಿದ ಅನ್ನದಾತರು, ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮಳೆಯಿಲ್ಲದೆ ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಜಮೀನಿನಲ್ಲಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ಸೆಟ್ಗಳೇ ಏಕೈಕ ಆಸರೆಯಾಗಿವೆ. ಆದರೆ ದಿನದಲ್ಲಿ ಕನಿಷ್ಠ ಪ್ರಮಾಣದಲ್ಲೂ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಡಲಾಗುತ್ತಿದೆ. ವಿದ್ಯುತ್ ಬಗ್ಗೆ ಕೇಳಿದರೆ ಅಧಿಕಾರಿಗಳು ಕೇವಲ ‘ಲೋಡ್ಶೆಡ್ಡಿಂಗ್’ ಎಂಬ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ರೈತರು ಕಿಡಿಕಾರಿದರು.
ಕಷ್ಟಪಟ್ಟು ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ವಿದ್ಯುತ್ ಇಲ್ಲದೆ ಪಂಪ್ಸೆಟ್ ಮೂಲಕ ನೀರು ಹರಿಸಲಾಗುತ್ತಿಲ್ಲ. ಕಣ್ಣೆದುರೇ ಫಸಲು ಒಣಗುತ್ತಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳ ಇಂತಹ ನಿರ್ಲಕ್ಷ್ಯ ಮುಂದುವರಿದರೆ ನಾವು ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ; ಕೇಂದ್ರದ ಅಧಿಸೂಚನೆ ವಿರೋಧಿಸಿ ರಾಜ್ಯ ಸರ್ಕಾರದ ನಿರ್ಣಯಗಳೇನು?
ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯ ಜೆಸ್ಕಾಂ ಕಚೇರಿಗಳನ್ನು ಸಂಪೂರ್ಣ ಬಂದ್ ಮಾಡಿ ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದ ರೈತ ಮುಖಂಡರು, ಸ್ಥಳೀಯ ಜೆಸ್ಕಾಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರಾರು ರೈತರು ಹಾಗೂ ರೈತ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

