ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಗಂಗನಾಡು, ಅತ್ಯಾಡಿ ಪರಿಸರದಲ್ಲಿ ಕಂಪನದ ಅನುಭವ ಆಗಿದೆ ಅಂತ ಕೆಲ ಗ್ರಾಮಸ್ಥರು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಂಪಿಸಿದ ಅನುಭವ ಆಯ್ತು. ಇದರಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜನ ಭಯಗೊಂಡಿದ್ದಾರಂತೆ. ಸ್ಥಳೀಯರು ಹೇಳುವ ಮಾಹಿತಿ ಪ್ರಕಾರ ಗುಡುಗು ಬಂದ ರೀತಿಯ ಅನುಭವವಾಗಿದೆ. ಇನ್ನು ಕೆಲವರು ಹೆಲಿಕಾಪ್ಟರ್ ಹಾರಿರಬಹುದು, ವಿಮಾನ ಕೆಳಗಿನಿಂದ ಹೋಗಿರಬಹುದು ಎಂದು ಹೇಳಿದ್ದಾರೆ. ಕೇವಲ ಎರಡು ಸೆಕೆಂಡ್ ಗಳ ಕಾಲ ಕಂಪನವಾದಂತೆ ಆಗಿದ್ದು, ಕೆಲ ಗ್ರಾಮಸ್ಥರಿಗೆ ಜೋರು ಶಬ್ಧ ಬಂದ ಅನುಭವವಾಗಿದೆ. ಕಲ್ಲು ಗಣಿಗಾರಿಕೆಗೆ ಇಟ್ಟ ಸ್ಪೋಟಕದ ಶಬ್ಧದಿಂದ ಭೂಮಿ ನಡುಗಿರಬಹುದು ಎಂದು ಜನ ಮೂಗು ಮುರಿಯುತ್ತಿದ್ದಾರೆ.
ಬೈಂದೂರು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಿದ್ದಾರೆ. ನಾನು ಭೇಟಿಕೊಟ್ಟ ಗ್ರಾಮಗಳಲ್ಲಿ ಬಿರುಕು ಬಿಡುವುದು, ವಸ್ತುಗಳು ಬೀಳುವಂತಹ ಘಟನೆ ನಡೆದಿಲ್ಲ. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ ಅಂತ ಪಬ್ಲಿಕ್ ಟಿವಿಗೆ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಭೂಗರ್ಭ ಶಾಸ್ತ್ರಜ್ಞರು ತನಿಖೆ ನಡೆಸಿದರೆ ಹೆಚ್ಚಿನ ಮಾಹಿತಿ ಬಹಿರಂಗ ಆಗಬಹುದು ಎಂದು ಸ್ಥಳೀಯ ಅರುಣ್ ಕುಮಾರ್ ಶೀರೂರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv