ಚೆನ್ನೈ/ಕೋಲ್ಕತ್ತಾ: ತಮಿಳುನಾಡು (Tamil Nadu) ಮತ್ತು ಪಶ್ಚಿಮ ಬಂಗಾಳದಲ್ಲಿ (West Bengal) ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 1,000 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತು, ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ (ECI) ತಿಳಿಸಿದೆ.
ಎರಡೂ ರಾಜ್ಯಗಳಲ್ಲಿ ಚುನಾವಣಾ (Assembly Elections 2026) ಅಕ್ರಮಗಳನ್ನು ತಡೆಯಲು ದೂರುಗಳು ಬಂದ 100 ನಿಮಿಷಗಳಲ್ಲಿ ಪರಿಹರಿಸಲು 5,011 ಕ್ಕೂ ಹೆಚ್ಚು (ಪಶ್ಚಿಮ ಬಂಗಾಳದಲ್ಲಿ 2,728 ಮತ್ತು ತಮಿಳುನಾಡಿನಲ್ಲಿ 2,283) ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು (ಎಫ್‌ಎಸ್‌ಟಿ) ನಿಯೋಜಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಪರಿಶೀಲನೆಗಾಗಿ 5,363 ಕ್ಕೂ ಹೆಚ್ಚು (ಪಶ್ಚಿಮ ಬಂಗಾಳದಲ್ಲಿ 3,142 ಮತ್ತು ತಮಿಳುನಾಡಿನಲ್ಲಿ 2,221) ಕಣ್ಗಾವಲು ತಂಡಗಳನ್ನು (ಎಸ್‌ಎಸ್‌ಟಿಗಳು) ನಿಯೋಜಿಸಲಾಗಿದೆ. ಫೆ.26 ರಿಂದ ಇಲ್ಲಿಯವರೆಗೆ ಎರಡೂ ರಾಜ್ಯಗಳಲ್ಲಿ 1,072.13 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಆಯೋಗ ಮಾಹಿತಿ ನೀಡಿದೆ. ಇದನ್ನೂ ಓದಿ: ಡಿಎಂಕೆ, ಎಐಎಡಿಎಂಕೆ ಮಧ್ಯೆ ನೇರ ಫೈಟ್ – ಸಂಚಲನ ಮೂಡಿಸಲಿದ್ದಾರಾ ವಿಜಯ್?
ಪಶ್ಚಿಮ ಬಂಗಾಳದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಪೈಕಿ 27.48 ಕೋಟಿ ರೂ. ನಗದು, 102.45 ಕೋಟಿ ರೂ. ಮದ್ಯ, 108.11 ಕೋಟಿ ರೂ. ಮಾದಕ ವಸ್ತುಗಳು, 55.88 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಮತ್ತು ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 178.83 ಕೋಟಿ ರೂ. ಮೌಲ್ಯದ ವಸ್ತುಗಳು ಸೇರಿವೆ.
ತಮಿಳುನಾಡಿನಲ್ಲಿ 100.19 ಕೋಟಿ ರೂ. ನಗದು, 3.85 ಕೋಟಿ ರೂ. ಮೌಲ್ಯದ ಮದ್ಯ, 78.72 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು, 159.31 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಮತ್ತು ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 259.14 ಕೋಟಿ ರೂ. ಮೌಲ್ಯದ ವಸ್ತುಗಳು ಸೇರಿವೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ವಿಧಾನಸಭಾ ಚುನಾವಣೆ ಮತದಾನ ಏ.23 ರಂದು ನಡೆಯಲಿದೆ. ಇದನ್ನೂ ಓದಿ: ಪಕ್ಷ ಕಟ್ಟಲು ಕಾರ್ಯಕರ್ತರು ಸಿದ್ಧರಿದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ



