ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಅಶೋಕ ವಿಶ್ವವಿದ್ಯಾಲಯದ (Ashoka University) ಪ್ರೊಫೆಸರ್ ಒಬ್ಬನನ್ನು ಹರಿಯಾಣ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಅಲಿ ಖಾನ್ ಮಹ್ಮದಾಬಾದ್ (Ali Khan Mahmudabad) ಎಂದು ಗುರುತಿಸಲಾಗಿದೆ. ಮಹ್ಮದಾಬಾದ್, ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾನೆ. ಆರೋಪಿ, ತನ್ನ ಪೋಸ್ಟ್‌ನಲ್ಲಿ ಕರ್ನಲ್ ಸೋಫಿಯಾ ಖುರೇಷಿಯವರಿಗೆ ಬಲಪಂಥೀಯರು ಪ್ರಶಂಸಿಸುತ್ತಿದ್ದಾರೆ. ಅವರು ಗುಂಪು ಹತ್ಯೆಗಳು, ಅನಿಯಂತ್ರಿತ ಬುಲ್ಡೋಝರ್ ಕಾರ್ಯಾಚರಣೆಗಳ ವಿರುದ್ಧವೂ ಧ್ವನಿ ಎತ್ತಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದ. ಅಲ್ಲದೇ ಪೋಸ್ಟ್‌ನಲ್ಲಿ ಅಮಾನವೀಯ, ನರಮೇಧ ಹಾಗೂ ಬೂಟಾಟಿಕೆ ಎಂಬ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದ.
ಈ ಸಂಬಂಧ ಬಿಜೆಪಿಯ ಯುವ ಘಟಕದ ಸದಸ್ಯರೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ, ಹೇಳಿಕೆಗೆ ಸಂಬಂಧಿಸಿದಂತೆ ಹರಿಯಾಣದ ಮಹಿಳಾ ಆಯೋಗವು ಅಲಿ ಖಾನ್ ಮಹ್ಮದಾಬಾದ್‌ಗೆ ಮೇ 15 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಮಹ್ಮದಾಬಾದ್ ಹಾಜರಾಗಿರಲಿಲ್ಲ.
ಆಪರೇಷನ್ ಸಿಂಧೂರದ ಬಗ್ಗೆಯ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಪ್ರಾಧ್ಯಾಪಕನನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ಅಜೀತ್ ಸಿಂಗ್ ದೃಢಪಡಿಸಿದ್ದಾರೆ.
ಈ ಬಂಧನದ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಪ್ರಾಧ್ಯಾಪಕರ ಪೋಸ್ಟ್ ರಾಷ್ಟ್ರವಿರೋಧಿ ಅಥವಾ ಸ್ತ್ರೀದ್ವೇಷಪೂರಿತವಲ್ಲ. ಬಿಜೆಪಿ ಕಾರ್ಯಕರ್ತೆಯೊಬ್ಬರ ದೂರಿಗಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ಎಕ್ಸ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಮುಖ್ಯಸ್ಥೆ ರೇಣು ಭಾಟಿಯಾ, ದೇಶದ ಹೆಣ್ಣುಮಕ್ಕಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ನಾವು ಗೌರಿವಿಸುತ್ತೇವೆ. ರಾಜಕೀಯ ವಿಜ್ಞಾನವನ್ನು ಕಲಿಸುವ ಪ್ರಾಧ್ಯಾಪಕರು ಅವರಿಗೆ ಬಳಸಿರುವ ಪದಗಳು ಹಾಗೂ ಕನಿಷ್ಠ ಆಯೋಗದ ಮುಂದೆ ಹಾಜರಾಗಿ ವಿಷಾದ ವ್ಯಕ್ತಪಡಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಪ್ರಾಧ್ಯಾಪಕ ಹಾಜರಾಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇದರ ನಡುವೆ ಬಂಧಿತ ಮಹ್ಮದಾಬಾದ್, ಆಯೋಗವು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾನೆ.