ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಮುಖಾಮುಖಿ (Face-off) ಘಟನೆಗಳು ಅರುಣಾಚಲ ಪ್ರದೇಶದ(Arunachal Pradesh) ಹಲವು ಭಾಗಗಳಲ್ಲಿ ಈಗಲೂ ಮುಂದುವರಿದಿವೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಹೇಳಿದ್ದಾರೆ.
ರಾಜಸ್ಥಾನದ ಅಲ್ವಾರ್ನಲ್ಲಿ‘ಹಿಮವೀರ್ ಸಮ್ಮಾನ್ ಸಮಾರೋಹ’ದಲ್ಲಿ ಯೋಧರು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಚೀನಾ ಸೈನಿಕರೊಂದಿಗಿನ ಇಂತಹ ಸಂಘರ್ಷದ ಸನ್ನಿವೇಶಗಳಲ್ಲಿ ಐಟಿಬಿಪಿಯ ನೂತನ ಶೌರ್ಯ ಪ್ಲಟೂನ್ಗಳು ಅಸಾಧಾರಣ ಕಾರ್ಯಾಚರಣೆ ನಡೆಸಿವೆ ಎಂದು ಶ್ಲಾಘಿಸಿದರು.
ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್(Xi Jinping) ಆಗಮಿಸಿದ್ದ ಸಂದರ್ಭದಲ್ಲೂ ಅರುಣಾಚಲ ಪ್ರದೇಶದ ಗಡಿಯಲ್ಲಿ ಇಂತಹ ಮುಖಾಮುಖಿ ನಡೆದಿತ್ತು ಎಂಬುದನ್ನು ಐಟಿಬಿಪಿ ಮುಖ್ಯಸ್ಥರ ಹೇಳಿಕೆ ಇದೇ ಮೊದಲ ಬಾರಿಗೆ ದೃಢಪಡಿಸಿದೆ.
2020ರಲ್ಲಿ 20 ಮಂದಿ ಭಾರತೀಯ ಸೈನಿಕರ ಹುತಾತ್ಮತೆಗೆ ಕಾರಣವಾಗಿದ್ದ ಗಲ್ವಾನ್ ಕಣಿವೆಯಂತಹ ಸಂಘರ್ಷದ ಸನ್ನಿವೇಶಗಳು ಮರುಕಳಿಸದಂತೆ ತಡೆಯಲು ಐಟಿಬಿಪಿಯ ತರಬೇತಿ ವಿಭಾಗವು ಯೋಧರಿಗೆ ಸ್ಟ್ರೈಕ್ (Strike) ಎಂಬ ಹೊಸ ಯುದ್ಧತಂತ್ರದ ಕೋರ್ಸ್ ರೂಪಿಸಿದೆ. ಗಡಿ ಮುಂಚೂಣಿಯಲ್ಲಿ ಎದುರಾಗುವ ಸವಾಲುಗಳನ್ನು ಹೊಸ ತಂತ್ರಜ್ಞಾನ ಹಾಗೂ ಸಮರ ಕಲೆಗಳ ಮೂಲಕ ಹಿಮ್ಮೆಟ್ಟಿಸಲು ಈ ತರಬೇತಿ ನೀಡಲಾಗುತ್ತಿದೆ ಎಂದು ಕಪೂರ್ ವಿವರಿಸಿದರು.
ITBP Chief points to China military’s rapid modernization, calls for need to invest in drone technology by Indian side
Vdo source: ystyd’s address https://t.co/kb6TyeN2ZT
— Sidhant Sibal (@sidhant) October 23, 2026
ಸಾಂಪ್ರದಾಯಿಕ ಯುದ್ಧ ಮಾರ್ಗಗಳ ಮೂಲಕ ಚೀನಾದ ‘ಪಿಎಲ್ಎ’ (PLA) ಪಡೆಯನ್ನು ಎದುರಿಸುವುದು ಕಷ್ಟಕರ, ಏಕೆಂದರೆ ಅವರು ತಂತ್ರಜ್ಞಾನ ಮತ್ತು ಆಧುನೀಕರಣದಲ್ಲಿ ಭಾರೀ ಹೂಡಿಕೆ ಮಾಡಿದ್ದಾರೆ. ಆದರೆ ಡ್ರೋನ್ ತಂತ್ರಜ್ಞಾನದಲ್ಲಿ ಚಿಕ್ಕ ದೇಶಗಳೂ ಬಲಿಷ್ಠ ರಾಷ್ಟ್ರಗಳಿಗೆ ಪ್ರಬಲ ಸವಾಲೊಡ್ಡಬಲ್ಲವು ಎಂದು ಅವರು ಉಕ್ರೇನ್–ರಷ್ಯಾ ಯುದ್ಧದ ಉದಾಹರಣೆ ನೀಡಿದರು.
ಗಡಿ ಕಾಯುವ ಪ್ರತಿಯೊಂದು ಬೆಟಾಲಿಯನ್ಗೂ ಒಂದೊಂದು ‘ಡ್ರೋನ್ ಪ್ಲಟೂನ್’ ನಿಯೋಜಿಸಲು ನಿರ್ಧರಿಸಲಾಗಿದೆ.ಡ್ರೋನ್ಗಳ ಸ್ವದೇಶಿ ತಯಾರಿಕೆ ಹಾಗೂ ಪೈಲಟ್ಗಳಿಗೆ ತರಬೇತಿ ನೀಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಡ್ರೋನ್ ಹಾಗೂ ಆ್ಯಂಟಿ-ಡ್ರೋನ್ ವ್ಯವಸ್ಥೆಗಳ ಖರೀದಿಗಾಗಿ ಕೇಂದ್ರ ಗೃಹ ಸಚಿವಾಲಯವು ₹3,000 ಕೋಟಿಗೂ ಅಧಿಕ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದು, 2030ರ ವೇಳೆಗೆ ಈ ಹಣ ಸಂಪೂರ್ಣವಾಗಿ ಬಳಕೆಯಾಗಲಿದೆ.
