ಶಿವಮೊಗ್ಗ: ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೆರಡು ದಿನದಿಂದ ಬೆಳಗಾವಿಯಲ್ಲಿ ಪುಂಡತನ ಹೆಚ್ಚಾಗುತ್ತಿದ್ದು, ನಿನ್ನೆ ರಾತ್ರಿಯೂ ಗುಂಪು ಸೇರಿ ಸರ್ಕಾರಿ ವಾಹನಗಳಿಗೆ ಬೆಂಕಿ ಇಡುವ ಮೂಲಕ ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಮಾಡಿದವರು ಯಾರೇ ಆದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇನ್ನೊಮ್ಮೆ ಇಂತಹ ಪ್ರಕರಣ ಆಗದಿರುವ ಹಾಗೇ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಇವರಿಬ್ಬರೂ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತಹ ಭಾರತೀಯ ಪುತ್ರರು. ಇವರ ಹೆಸರಿನಲ್ಲಿ, ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಭಾಷೆ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಜೊತೆಗೆ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ
ಘಟನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು, ವಿನಂತಿಸುತ್ತೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: MES ಪುಂಡಾಟಿಕೆಯನ್ನು ಖಂಡಿಸಿದ ಸಿಎಂ – 27 ಮಂದಿ ಅರೆಸ್ಟ್
ರಾಯಣ್ಣ ಮೂರ್ತಿ ಭಂಗ ಪ್ರಕರಣದ ಕುರಿತು ಮಾತನಾಡಿದ ಅವರು, ರಾಯಣ್ಣ ಮೂರ್ತಿ ಭಂಗ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಕೆಲವರ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.