ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸಲಹೆ ನೀಡಿದ ಹಿನ್ನೆಲೆ ವರ್ಕ್ ಫ್ರಮ್ ಹೋಂ ಗೆ ಮನವಿ ಮಾಡಿ ರಾಜ್ಯ ಟ್ರಾವೆಲ್ಸ್ ಅಸೋಸಿಯೇಷನ್ (Karnataka Travels Association) ಪ್ರಧಾನಿಗಳಿಗೆ ಮನವಿ ಮಾಡಿದೆ.
ಪ್ರತಿಯೊಬ್ಬ ಟ್ರಾವೆಲ್ಸ್ ಮಾಲೀಕರಿಗೂ ಕನಿಷ್ಠ 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಮಾಸಿಕ ಇಎಮ್‌ಐ ಭಾರ ಇದೆ. ಕೆಲವು ದೊಡ್ಡ ಆಪರೇಟರ್‌ಗಳು ಪ್ರತಿ ತಿಂಗಳು 1 ಕೋಟಿ ರೂಪಾಯಿಗೂ ಅಧಿಕ ಇಎಮ್‌ಐ ಪಾವತಿಸುತ್ತಿದ್ದಾರೆ. ಇದರ ಜೊತೆಗೆ ಡ್ರೈವರ್‌ಗಳು ಮತ್ತು ಸೂಪರ್‌ವೈಸರ್‌ಗಳ ಸಂಬಳ, ಜಿಎಸ್‌ಟಿ, ರಸ್ತೆ ತೆರಿಗೆ, ನೌಕರರ ಸೌಲಭ್ಯಗಳು, ಕಚೇರಿ ಬಾಡಿಗೆ, ವಾಹನ ಪಾರ್ಕಿಂಗ್ ಬಾಡಿಗೆ, ಭದ್ರತಾ ಶುಲ್ಕ ಸೇರಿದಂತೆ ಅನೇಕ ಕಾರ್ಯಾಚರಣಾ ಮತ್ತು ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗಿದೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವರ್ಕ್ ಫ್ರಮ್ ಹೋಂ ನೀತಿಗಳು ಟ್ರಾವೆಲ್ಸ್ ಮತ್ತು ಸಾರಿಗೆ ಉದ್ಯಮಕ್ಕೆ ಇನ್ನಷ್ಟು ಸಂಕಷ್ಟವನ್ನು ತಂದಿವೆ. ಕಚೇರಿ ಸಂಚಾರ, ಕಾರ್ಪೊರೇಟ್ ಪ್ರಯಾಣ ಹಾಗೂ ನೌಕರರ ಸಂಚಾರ ಗಣನೀಯವಾಗಿ ಕಡಿಮೆಯಾಗಿರುವುದರಿಂದ ವಾಹನ ಮಾಲೀಕರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಹಲವಾರು ವಾಹನಗಳು ಪಾರ್ಕಿಂಗ್‌ಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆದಾಯ ಕಡಿಮೆಯಾದರೂ ಇಎಮ್‌ಐ ಮತ್ತು ತೆರಿಗೆಗಳ ಭಾರ ಮಾತ್ರ ನಿರಂತರವಾಗಿ ಮುಂದುವರಿಯುತ್ತಿದೆ.
ಸಾರಿಗೆ ಮತ್ತು ಟ್ರಾವೆಲ್ಸ್ ಉದ್ಯಮ ದೇಶದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ. ಲಕ್ಷಾಂತರ ಚಾಲಕರು, ಸಿಬ್ಬಂದಿ, ಮೆಕ್ಯಾನಿಕ್‌ಗಳು, ಕಚೇರಿ ನೌಕರರು, ಸಣ್ಣ ವ್ಯಾಪಾರಿಗಳು ಹಾಗೂ ಕುಟುಂಬಗಳ ಜೀವನೋಪಾಯ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಕಾರ್ಪೊರೇಟ್ ಕ್ಷೇತ್ರ, ಪ್ರವಾಸೋದ್ಯಮ, ವಿಮಾನ ನಿಲ್ದಾಣ ಸಂಪರ್ಕ, ತೀರ್ಥಯಾತ್ರೆ ಸಂಚಾರ ಹಾಗೂ ವ್ಯವಹಾರಿಕ ಪ್ರಯಾಣ ಎಲ್ಲವೂ ಈ ಉದ್ಯಮದ ಮೇಲೆ ಅವಲಂಬಿತವಾಗಿವೆ.
ಆದ್ದರಿಂದ ಕೇಂದ್ರ ಸರ್ಕಾರ ಈ ಕ್ಷೇತ್ರದ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಆರ್ಥಿಕ ಪ್ಯಾಕೇಜ್, ಇಎಮ್‌ಐ ಮರುರಚನೆ ನೆರವು, ಜಿಎಸ್‌ಟಿ ಮತ್ತು ರಸ್ತೆ ತೆರಿಗೆ ಸಡಿಲಿಕೆ, ಪರವಾನಗಿ ನವೀಕರಣ ಸರಳೀಕರಣ, ಇಂಧನ ದರ ಸಮತೋಲನ ಹಾಗೂ ಟ್ರಾವೆಲ್ಸ್ ಮತ್ತು ಸಾರಿಗೆ ಉದ್ಯಮ ಪುನಶ್ಚೇತನ ನೀತಿಗಳನ್ನು ತುರ್ತಾಗಿ ಜಾರಿಗೆ ತರಬೇಕು ಎಂದು ಮನವಿ ಮಾಡಲಾಗಿದೆ. ಇಲ್ಲವಾದರೆ ಸಾವಿರಾರು ವಾಹನ ಮಾಲೀಕರು ಮತ್ತು ಅವರೊಂದಿಗೆ ಸಂಬಂಧಿಸಿದ ಲಕ್ಷಾಂತರ ಕುಟುಂಬಗಳು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಅಪಾಯವಿದೆ ಎಂದು ರಾಜ್ಯ ಟ್ರಾವೆಲ್ಸ್ ಅಸೋಸಿಯೇಷನ್ ಮನವಿ ಮಡಿದೆ.

