ಬೇಸಿಗೆ ಆರಂಭದಲ್ಲೇ 99 ಅಡಿಗೆ ಕುಸಿದ ಕೆಆರ್‌ಎಸ್‌

2 Min Read

ಮಂಡ್ಯ: ಬೇಸಿಗೆ ಆರಂಭದಲ್ಲೇ ಕೆಆರ್‌ಎಸ್ (KRS) ನೀರಿನ ಮಟ್ಟ 99 ಅಡಿಗೆ ಕುಸಿದಿದೆ.

ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಮಟ್ಟ ಇಳಿಕೆ ಕಂಡಿದೆ. ಒಂದು ವೇಳೆ ಮುಂಗಾರು ತಡವಾದ್ರೆ ಬೆಂಗಳೂರು ಮಾತ್ರವಲ್ಲದೇ ಕಾವೇರಿ ನೀರು ಅವಲಂಬಿಸಿರುವ ಜನರಿಗೆ ನೀರಿನ ಸಮಸ್ಯೆ ಎದುರಾಗುವ ಭೀತಿಯಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಕೂಡಿಟ್ಟು ಐಸ್‌ಕ್ರೀಮ್ ಅಂಗಡಿ ತೆರೆದ ಮಹಿಳೆ

ಈ ವರ್ಷ ಕೆಆರ್‌ಎಸ್ ಅಣೆಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗುವ ಮೂಲಕ ದಾಖಲೆ ಬರೆದಿತ್ತು. ಇದೀಗ 124.80 ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯದಲ್ಲಿ ನೀರಿನ ಮಟ್ಟ 99 ಅಡಿಗೆ ತಲುಪಿದೆ. ಒಳಹರಿವು 66 ಕ್ಯೂಸೆಕ್ ಇದ್ದು, 4,033 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೂ ಕೂಡ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ಕಟ್ಟು ಪದ್ದತಿಯಂತೆ ನೀರು ನೀಡಲಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ಕುಡಿಯಲು ಅವಲಂಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರಿಗೆ ಮುಂಗಾರುವರೆಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಡ್ಯಾಂನಲ್ಲಿ 60 ಅಡಿ ಬರುವವರೆಗೂ ನೀರು ಬಳಸಲು ಸಾಧ್ಯವಿದೆ. ಅಂದರೆ ಇನ್ನೂ 15 ಟಿಎಂಸಿ ನೀರು ಬಳಸಲು ಲಭ್ಯವಿದೆ. 2003ರಲ್ಲಿ ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನೀರಿನ ಮಟ್ಟ 65.90 ಅಡಿ ತಲುಪಿದ್ದು ಈವರೆಗಿನ ಕನಿಷ್ಟ ಮಟ್ಟದ ದಾಖಲೆಯಾಗಿದೆ.

ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ ಎನ್ನುವ ಹವಾಮಾನ ತಜ್ಞರ ವರದಿ ಆತಂಕಕ್ಕೆ ಕಾರಣವಾಗಿದೆ. ಮುಂಗಾರಿನ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆ ಮಳೆ ಕ್ಷೀಣಿಸುವ ಸಾಧ್ಯತೆ ಇದೆ. ಇದು ಆತಂಕ ಮೂಡಿಸಿದೆ. ಕುಡಿಯುವ ಮತ್ತು ಬೆಳೆಗೆ ನೀರೊದಗಿಸಲು ಮಳೆ ಅನಿವಾರ್ಯವಾಗಲಿದೆ.ಇದನ್ನೂ ಓದಿ: ಅಮೆರಿಕ ನೌಕಾ ದಿಗ್ಬಂಧನ ತೆಗೆಯದಿದ್ರೆ, ಹಾರ್ಮುಜ್‌ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಇರಾನ್‌ ವಾರ್ನಿಂಗ್‌

ಕಳೆದ 10 ವರ್ಷದಲ್ಲಿ ನೀರಿನ ಸಂಗ್ರಹ(ಏ.18ಕ್ಕೆ)
ವರ್ಷ                   ನೀರಿನ ಮಟ್ಟ
2017                    74.32 ಅಡಿ
2018                   73.94 ಅಡಿ
2019                   92.37 ಅಡಿ
2020                 103.39 ಅಡಿ
2021                  97.72 ಅಡಿ
2022                 103.26 ಅಡಿ
2023                 93.46 ಅಡಿ
2024                   83.22 ಅಡಿ
2025                  101.35 ಅಡಿ
2026                  99 ಅಡಿ

 

Share This Article