ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕದ( Iran-USA) ನಡುವಿನ ಕದನ ವಿರಾಮ ಮಾತುಕತೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ (Pakistan) ನಡೆಯಬೇಕಿದ್ದ ಶಾಂತಿ ಮಾತುಕತೆ ಸಭೆ ರದ್ದಾಗಿದೆ.

ಇರಾನ್ ಪ್ರಸ್ತಾಪ ಅಮೆರಿಕದ ನಿರೀಕ್ಷೆಗಳಿಗೆ ತಕ್ಕಂತೆ ಇರಲಿಲ್ಲ ಮತ್ತು ಅಮೆರಿಕದ ಪ್ರತಿನಿಧಿಗಳನ್ನು ಕಳುಹಿಸುವುದು ಸಮಯ ಮತ್ತು ಹಣದ ವ್ಯರ್ಥ ಎಂದು ಹೇಳಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಭೆಯನ್ನು ರದ್ದುಗೊಳಿಸಿದ್ದಾರೆ.

ತನ್ನ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದಿರುವ ಟ್ರಂಪ್, “ಇರಾನ್ ನಾಯಕತ್ವದಲ್ಲಿ ತೀವ್ರ ಗೊಂದಲ ಮತ್ತು ಆಂತರಿಕ ಕಲಹಗಳಿವೆ, ಅಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಅಲ್ಲಿ ಯಾರ ಜೊತೆ ಮಾತನಾಡಬೇಕು ಎನ್ನುವುದು ಯಾರಿಗೂ ತಿಳಿದಿಲ್ಲ. ನಾವು ಎಲ್ಲಾ ಕಾರ್ಡ್‌ಗಳನ್ನು ಹೊಂದಿದ್ದೇವೆ, ಅವರಿಗೆ ಮಾತನಾಡಲು ಮನಸ್ಸಿದ್ದರೆ ಅವರೇ ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಬಹುದು” ಎಂದು ಹೇಳಿದ್ದಾರೆ.

ನಿಗದಿ ಪ್ರಕಾರ ನಡೆದಿದ್ದರೆ ಅಮೆರಿಕದ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರು ಶನಿವಾರ ಪಾಕಿಸ್ತಾನಕ್ಕೆ ಶನಿವಾರ ಆಗಮಿಸಬೇಕಿತ್ತು.

ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಮೊದಲೇ ಇರಾನ್ ತಿಳಿಸಿತ್ತು. ತನ್ನ ಅಭಿಪ್ರಾಯಗಳನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ತಿಳಿಸಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಇರಾನ್ ಯುದ್ಧ- ಕಾಂಡೋಮ್ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆ

ಈ ಸಂಘರ್ಷವನ್ನು ತಣಿಸಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿ ಇಸ್ಲಾಮಾಬಾದ್‌ನಲ್ಲಿ ಸಭೆಯನ್ನು ಆಯೋಜಿಸಿತ್ತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಪಾಕಿಸ್ತಾನಕ್ಕೆ ಶುಕ್ರವಾರ ತಡರಾತ್ರಿ ಆಗಮಿಸಿದ್ದರು. ಈಗ ಟ್ರಂಪ್ ಸಭೆಯನ್ನು ದಿಢೀರ್ ರದ್ದುಗೊಳಿಸಿದ್ದರಿಂದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ.
ಮಾತುಕತೆ ರದ್ದಾಗಲು ಕಾರಣ ಏನು?
ಇರಾನ್‌ನ ಎಲ್ಲಾ ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಎಲ್ಲಾ ಪ್ರಮುಖ ಪುಷ್ಟೀಕರಣ ಕೇಂದ್ರಗಳನ್ನು ಮುಚ್ಚಬೇಕೆಂದು ಅಮೆರಿಕ ಪಟ್ಟು ಹಿಡಿದಿತ್ತು. ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದಲು ನಾವು ಬಿಡುವುದಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ:ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್ ಕೆಂಡಾಮಂಡಲ
ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಪೂರ್ಣ ಸಾರ್ವಭೌಮತ್ವ ಮತ್ತು ಅಲ್ಲಿ ಚಲಿಸುವ ಹಡಗುಗಳ ಮೇಲೆ ಶುಲ್ಕ (ಟೋಲ್) ವಿಧಿಸುವ ಹಕ್ಕನ್ನು ಇರಾನ್ ಕೇಳಿದ್ದರಿಂದ ಮಾತುಕತೆ ಮತ್ತೆ ಮುಂದುವರಿಯಲಿಲ್ಲ.

