ಜೊತೆ ಜೊತೆಯಲಿ ಧಾರಾವಾಹಿಯಿಂದ ಕೊನೆಗೂ ಅನಿರುದ್ದ ಹೊರ ನಡೆಯುವುದು ನಿಶ್ಚಿತವಾಗಿದೆ. ಮತ್ತೆ ಆ ಧಾರಾವಾಹಿಯಲ್ಲಿ ಅವರನ್ನು ತಗೆದುಕೊಳ್ಳಬಾರದು ಹಾಗೂ ಬೇರೆ ಯಾವುದೇ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘವು ನಿರ್ಧಾರ ತಗೆದುಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ನೀಡಿದ ದೂರಿನ ಮೇರೆಗೆ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಾಗಿ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ , ‘ಅನಿರುದ್ಧ ಅವರ ಮೇಲೆ ನಿರ್ಮಾಪಕರು ದೂರು ನೀಡಿದ್ದರು. ಅದನ್ನು ಪರಿಶೀಲಿಸಿ ಮಹತ್ವದ ನಿರ್ಧಾರವೊಂದನ್ನು ತಗೆದುಕೊಂಡಿದ್ದೇನೆ. ಅವರನ್ನು ಬ್ಯಾನ್ ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ, ಮುಂದೆ ಯಾರೂ ಅವರನ್ನು ಧಾರಾವಾಹಿಗಾಗಲಿ, ರಿಯಾಲಿಟಿ ಶೋಗಾಗಿ ಆಯ್ಕೆ ಮಾಡಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದೇವೆ. ಈ ಕುರಿತು ವಾಹಿನಿಗೂ ತಿಳಿಸಿದ್ದೇವೆ’ ಅಂದರು. ಇದನ್ನೂ ಓದಿ: ಫಸ್ಟ್ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ
ಕೇವಲ ಅನಿರುದ್ಧ ಮಾತ್ರವಲ್ಲ, ಅನೇಕ ಕಲಾವಿದರು ಹೀಗೆಯೇ ನಿರ್ಮಾಪಕರಿಗೆ ತೊಂದರೆ ಕೊಡುತ್ತಲೇ ಇದ್ದಾರೆ. ಅವರನ್ನು ಸರಿದಾರಿಗೆ ತರಲು ಏನಾದರೂ ಒಂದು ಕಠಿಣ ಕ್ರಮವನ್ನು ತಗೆದುಕೊಳ್ಳಲೇಬೇಕು. ನಿರ್ಮಾಪಕರಿಗೆ ತೊಂದರೆ ಆದರೆ, ಅನೇಕರಿಗೆ ಅದರಿಂದ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅನಿರುದ್ಧ ಘಟನೆಯು ಇತರರಿಗೆ ಪಾಠವಾಗಬೇಕು ಎನ್ನುತ್ತಾರೆ ಭಾಸ್ಕರ್.
ಅನಿರುದ್ಧ ವಿಚಾರವಾಗಿ ಈಗಾಗಲೇ ಜೀ ಕನ್ನಡ ವಾಹಿನಿಯೊಂದಿಗೆ ಮಾತನಾಡಿರುವುದಾಗಿ ಭಾಸ್ಕರ್ ತಿಳಿಸಿದರು. ಈಗಾಗಲೇ ಹಲವು ಬಾರಿ ವಾಹಿನಿಯು ಕೂಡ ಅನಿರುದ್ಧ ಮತ್ತು ನಿರ್ಮಾಪಕರ ನಡುವೆ ರಾಜಿ ಸಂಧಾನ ಮಾಡಿದೆಯಂತೆ. ಆದರೂ, ಅದು ಸರಿ ಹೋಗದೇ ಇರುವ ಕಾರಣಕ್ಕಾಗಿ ಅನಿವಾರ್ಯವಾಗಿ ಇಂಥದ್ದೊಂದು ಕ್ರಮ ತಗೆದುಕೊಳ್ಳಬೇಕಾಗಿದೆ ಎನ್ನುತ್ತಾರೆ ಭಾಸ್ಕರ್.