ಬಾಗಲಕೋಟೆ: ಜಿಲ್ಲೆಯ ಬೀಳಗಿ(Bilagi) ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹದಿನೆಂಟರ ಹರೆಯದ ಯುವಕನ ಪ್ರಕರಣ ಇದೀಗ ರಕ್ತಸಿಕ್ತ ಅಂತ್ಯ ಕಂಡಿದೆ. ತನ್ನ ಪ್ರೇಯಸಿ ತನಗೆ ಮಾತ್ರ ದಕ್ಕಬೇಕೆಂಬ ಹಠಕ್ಕೆ ಬಿದ್ದ ಮತ್ತೊಬ್ಬ ಪ್ರೇಮಿ ಆಕೆಯ ಸ್ವಂತ ಸಹೋದರನನ್ನೇ ಎತ್ತಿಕಟ್ಟಿ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವಿಕಾಸ್ ದಳವಾಯಿ (18) ತ್ರಿಕೋನ ಪ್ರೇಮಕಥೆಗೆ ಬಲಿಯಾದ ಯುವಕ. ಯುವತಿಯ ಇನ್ನೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ ರಾಜು ಸೇರಿ ಈ ಕೃತ್ಯ ಎಸಗಿದ್ದಾರೆ.
ಏನಿದು ಘಟನೆ?
ಮೇ 20 ರಂದು ಗಿರಿಸಾಗರ ಗ್ರಾಮದಲ್ಲಿ ಓಂಕಾರೇಶ್ವರ ದೇವಿ ಜಾತ್ರೆ ಇತ್ತು. ಜಾತ್ರೆಯ ಪ್ರಯುಕ್ತ ಅಂದು ರಾತ್ರಿ ಗ್ರಾಮದಲ್ಲಿ ನಾಟಕ ಏರ್ಪಡಿಸಲಾಗಿತ್ತು. ವಿಕಾಸ್ ದಳವಾಯಿ ರಾತ್ರಿ 10 ಗಂಟೆ ಸುಮಾರಿಗೆ ನಾಟಕ ನೋಡಿ ಬರುವುದಾಗಿ ಮನೆಯಿಂದ ಹೊರಗೆ ಹೋಗಿದ್ದನು. ಆದರೆ ತಡರಾತ್ರಿಯಾದರೂ ಆತ ಮನೆಗೆ ಮರಳಿರಲಿಲ್ಲ, ಸಂಬಂಧಿಕರ ಮನೆಗಳಲ್ಲೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೀಳಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಪೊಲೀಸರು ತನಿಖೆ ಕೈಗೊಂಡಾಗ ಈ ನಾಪತ್ತೆ ಪ್ರಕರಣಕ್ಕೆ ಭೀಕರ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳಾದ ಕೃಷ್ಣಾ ಮತ್ತು ರಾಜು ಸೇರಿ ವಿಕಾಸ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಅದು ನೀರಿನ ಮೇಲೆ ತೇಲಿ ಬರದಂತೆ ಚೀಲದೊಳಗೆ ಭಾರವಾದ ಕಲ್ಲುಗಳನ್ನು ಹಾಕಿದ್ದರು. ನಂತರ ಬೀಳಗಿ ತಾಲೂಕಿನ ಅನಗವಾಡಿ ಬಳಿ ಹರಿಯುವ ಘಟಪ್ರಭಾ ನದಿಗೆ ಎಸೆದು ಪರಾರಿಯಾಗಿದ್ದರು. ಈಗ ನದಿಯಿಂದ ವಿಕಾಸ್‌ನ ಶವವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ತ್ರಿಕೋನ ಪ್ರೇಮಕಥೆ!
ಕೊಲೆಯಾದ ವಿಕಾಸ್ ಹಾಗೂ ಆರೋಪಿ ಕೃಷ್ಣಾ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವತಿ ತನಗೆ ಮಾತ್ರ ದಕ್ಕಬೇಕೆಂದು ಸಂಚು ರೂಪಿಸಿದ ಕೃಷ್ಣಾ, ಯುವತಿಯ ಸಹೋದರ ರಾಜು ಬಳಿ ಹೋಗಿ, “ವಿಕಾಸ್ ನಿನ್ನ ತಂಗಿಯನ್ನ ಪ್ರೀತಿಸುತ್ತಿದ್ದಾನೆ, ಇದರಿಂದ ಊರಲ್ಲಿ ನಿಮಗೆ ಅಪಮಾನ ಆಗ್ತಿಲ್ವಾ?” ಎಂದು ಹೇಳಿ ಆತನನ್ನು ರೊಚ್ಚಿಗೆಬ್ಬಿಸಿದ್ದಾನೆ. ಕೃಷ್ಣಾ ಮಾತಿಗೆ ಮರುಳಾದ ಸಹೋದರ ರಾಜು, ವಿಕಾಸ್‌ನನ್ನು ಮುಗಿಸಲು ಕೈಜೋಡಿಸಿದ್ದಾನೆ.
ಬೆಳಕಿಗೆ ಬಂದಿದ್ದು ಹೇಗೆ?
ಕೊಲೆ ನಡೆದ ಬಳಿಕ ಪ್ರಮುಖ ಆರೋಪಿಗಳಾದ ಕೃಷ್ಣಾ ಮತ್ತು ರಾಜು ತಲೆಮರೆಸಿಕೊಂಡಿದ್ದಾರೆ. ತನಿಖೆ ಚುರುಕುಗೊಳಿಸಿದ ಬೀಳಗಿ ಪೊಲೀಸರು ಅನುಮಾನದ ಮೇಲೆ ರಾಜುನ ಸಹೋದರ ರವಿ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಹೊರಬಿದ್ದಿದೆ.
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಲೆಮರೆಸಿಕೊಂಡಿರುವ ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
