ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವನ ಮೃತದೇಹವನ್ನು ಎತ್ತಿಕೊಂಡು ಹೋಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮಿತಾಬ್ ಜೊತೆ ಅಭಿಷೇಕ್ ಕೂಡ ಮೃತದೇಹವನ್ನು ಎತ್ತಿಕೊಂಡಿದ್ದಾರೆ.
ಇತ್ತೀಚೆಗೆ ಅಮಿತಾಬ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರು ಮೃತಪಟ್ಟಿದ್ದಕ್ಕೆ ಬಚ್ಚನ್ ಅವರ ಇಡೀ ಕುಟುಂಬ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಅಮಿತಾಬ್ ಹಾಗೂ ಅಭಿಷೇಕ್ ಮೃತದೇಹವನ್ನು ಹಿಡಿದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಬೆಂಬಲಿಗನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ – ವಿಡಿಯೋ ನೋಡಿ
ಅಭಿಮಾನಿಯೊಬ್ಬರು ತಂದೆ-ಮಗನ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಅಮಿತಾಬ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೃತದೇಹವನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ದಶಕಗಳಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಬಚ್ಚನ್ ಕುಟುಂಬ ಗೌರವ ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಅಮಿತಾಬ್ ಹಾಗೂ ಅಭಿಷೇಕ್ ಅವರ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮಿತಾಬ್ ರೈತರ ಸಾಲಮನ್ನಾ ಮಾಡಿದ ಬಳಿಕ ಮನೆ ಕೆಲಸದವನ ಮೃತದೇಹ ಎತ್ತಿಕೊಂಡು ಹೋಗುತ್ತಿರುವ ಫೋಟೋ ನೋಡಿ ಬಿಗ್-ಬಿ ರೀಲ್ ಹಾಗೂ ರಿಯಲ್ ಲೈಫ್ ಹೀರೋ ಎಂದು ಹೊಗಳುತ್ತಿದ್ದಾರೆ.