– ಹೈದರಾಬಾದ್ನಲ್ಲಿ ನ.2 ರಂದು ನಡೆಯುವ ಪಾದಯಾತ್ರೆಯಲ್ಲಿ ಅಮಿತ್ ಶಾ ಭಾಗಿ
– ತೆಲಂಗಾಣದಲ್ಲಿ ನೀರಿನ ಬಿಕ್ಕಟ್ಟು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ
ಹೈದರಾಬಾದ್: ಎಸ್ಐಆರ್ ಪ್ರಕ್ರಿಯೆ, ವೋಟ್ ಚೋರಿ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ನಂ.1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ. ಇದಕ್ಕೆ ಕೌಂಟರ್ ಕೊಡಲು ಮುಂದಾಗುತ್ತಿರುವ ಬಿಜೆಪಿ ನವೆಂಬರ್ 2 ರಿಂದ ತೆಲಂಗಾಣದಲ್ಲಿ ಬೃಹತ್ ಪಾದಯಾತ್ರೆ (BJP Padayatra) ಹಮ್ಮಿಕೊಂಡಿದೆ.
ಕಾಂಗ್ರೆಸ್ ನಾಯಕರು (Congress Leaders) ರಾಜ್ಯದಲ್ಲಿ ಮತ್ತು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾವು ʻಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಕೊನೆಗೊಳಿಸಿ” (ಲೋಕತಂತ್ರ ಬಚಾವೋ, ಅರಾಜಕ್ತ ಹಟಾವೋ)ʼ ಎಂಬ ಘೋಷವಾಕ್ಯದಡಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನ.2 ರಂದು ಪಾದಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾಗವಹಿಸಲಿದ್ದಾರೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರು ಸೋಮವಾರ ತಿಳಿಸಿದ್ದಾರೆ.
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ‘ಮತ ಕಳ್ಳತನ’ ವಿರೋಧಿ ಸಾರ್ವಜನಿಕ ರ್ಯಾಲಿಯ ಮರುದಿನವೇ ಬಿಜೆಪಿ ಪಾದಯಾತ್ರೆ ನಡೆಯುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗಳನ್ನ ಖಂಡಿಸಿದ ಅವರು, ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿಯಾ ಆಗಿರುವುದನ್ನ ಕಾಂಗ್ರೆಸ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. 2014ರಿಂದ ನಿರಂತರವಾಗಿ ಚುನಾವಣೆಗಳಲ್ಲಿ ಸೋಲುತ್ತಿರುವ ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಈ ರೀತಿ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
SIR ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕಾಂಗ್ರೆಸ್ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಆರೋಪಿಸಿದ ರಾಮಚಂದರ್ ರಾವ್, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಸವಾಲು ಹಾಕಿದರು. ಮತದಾರರ ಪಟ್ಟಿಯಿಂದ ಎಷ್ಟು ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿಯವರ ಸ್ವಗ್ರಾಮವಾದ ಕೊಂಡಾರೆಡ್ಡಿಪಲ್ಲಿಗೆ ಭೇಟಿ ನೀಡಲು ತಾವು ಸಿದ್ಧ ಎಂದು ಹೇಳಿದರು.
ಎಸ್ಐಆರ್ ಸಂದರ್ಭದಲ್ಲಿ 13 ಕೋಟಿ ಮತದಾರರ ಹೆಸರುಗಳನ್ನ ಡಿಲೀಟ್ ಮಾಡಲಾಗಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅವರು, ಈ ಪೈಕಿ ಅನೇಕ ಹೆಸರುಗಳು ‘ಗೈರುಹಾಜರಿ, ಸ್ಥಳಾಂತರ, ಮರಣ ಮತ್ತು ನಕಲಿ ನೋಂದಣಿ’ (ASDD) ವರ್ಗಕ್ಕೆ ಸೇರಿವೆ. SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಯಾರಾದರೂ ಹೆಸರುಗಳನ್ನ ಕಳೆದುಕೊಂಡಿದ್ದರೆ, ಅವುಗಳನ್ನು ಮತ್ತೆ ಸೇರ್ಪಡೆಗೊಳಿಸಲು ಅವಕಾಶವಿದೆ. ಈ ಸೌಲಭ್ಯವು ಅರ್ಹ ಮತದಾರರಿಗೆ ಲಭ್ಯವಿದೆ ಎಂದು ವಿವರಿಸಿದರು.
ಡಿಲೀಟ್ ಆಗಿದೆ ಎನ್ನಲಾಗುತ್ತಿರುವ 13 ಕೋಟಿ ಮತದಾರರ ಪೈಕಿ 2.8 ಕೋಟಿ ಮಂದಿ ಮೃತಪಟ್ಟಿದ್ದಾರೆ, 3 ಕೋಟಿ ಮಂದಿ ಬೂತ್ ಮಟ್ಟದ ಅಧಿಕಾರಿಗಳು (BLO) ಪರಿಶೀಲನೆಗೆ ತೆರಳಿದಾಗ ಗೈರಾಗಿದ್ದಾರೆ. 6.3 ಕೋಟಿ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 1 ಕೋಟಿ ಹೆಸರುಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು. ಹೈದರಾಬಾದ್ನ ವ್ಯಕ್ತಿಯೊಬ್ಬರು ಮೂರು ಸ್ಥಳಗಳಲ್ಲಿ ಮತದಾರರಾಗಿ ನೋಂದಣಿಯಾಗಿರುವ ಉದಾಹರಣೆಯನ್ನೂ ನೋಡಿದ್ದೇನೆ ಎಂದ ಅವರು, ತೆಲಂಗಾಣದ ಕಾಂಗ್ರೆಸ್ ಸಚಿವರು ಮತದಾರರ ಪಟ್ಟಿಯಿಂದ ಅಳಿಸಲಾದ ಕನಿಷ್ಠ 10 ಹೆಸರುಗಳನ್ನು ತೋರಿಸಲಿ ಎಂದು ಸವಾಲ್ ಹಾಕಿದರು.
ತೆಲಂಗಾಣದಲ್ಲಿ ನೀರಿನ ಬಿಕ್ಕಟ್ಟು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಮಳೆಯ ಕೊರತೆಯಿಂದ ತೀವ್ರ ನೀರಿನ ಅಭಾವ ಎದುರಾಗಿರುವ ಸಂದರ್ಭದಲ್ಲಿ, ತೆಲಂಗಾಣದ ಕಾಂಗ್ರೆಸ್ ನಾಯಕರು ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವುದನ್ನ ರಾಮಚಂದರ್ ರಾವ್ ಟೀಕಿಸಿದರು.
ರಾಜ್ಯದ 600ಕ್ಕೂ ಹೆಚ್ಚು ತಾಲೂಕುಗಳ ಪೈಕಿ ಸುಮಾರು 300 ಮಂಡಲಗಳಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ನಿನೊ ಪರಿಣಾಮದ ಹಿನ್ನೆಲೆ ಹೈದರಾಬಾದ್ನಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ನಗರದಲ್ಲಿ ಪ್ರತಿದಿನ ಸುಮಾರು 8,000 ನೀರಿನ ಟ್ಯಾಂಕರ್ಗಳಿಗೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮೊದಲು ರಾಜ್ಯದ ಜನರು ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯನ್ನ ಪರಿಹರಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
