ಚೆನ್ನೈ: ವಿಜಯ್ ದಳಪತಿ ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು. ಆದರೆ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳು ಸಮಾರಂಭಕ್ಕೆ ಗೈರಾಗಿದ್ದರು. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ವಿಜಯ್ ಪೋಷಕರು, ಆಪ್ತರು ಹಾಗೂ ನಟಿ ತ್ರಿಷಾ ಕೃಷ್ಣನ್ ಕೂಡ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಿಗೆ ಕಾರಣವಾಗಿದೆ.

ವಿಜಯ್ ಮತ್ತು ತ್ರಿಷಾ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಆಗಾಗ ಕೇಳಿಬರುತ್ತಿತ್ತು. ಅಷ್ಟೇ ಅಲ್ಲ ಇಬ್ಬರೂ ಹಲವು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಈ ವದಂತಿ ನಿಜವಿರಬಹುದೆನೋ ಎಂದು ಕೆಲವರು ಮಾತಾಡುತ್ತಿದ್ದಾರೆ. ಈಗ ವಿಜಯ್ ಅವರ ಪತ್ನಿ ಮತ್ತು ಮಕ್ಕಳು ಪ್ರಮಾಣವಚನ ಸಮಾರಂಭಕ್ಕೆ ಗೈರಾಗಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇಂತಹ ಮಹತ್ವದ ಕ್ಷಣದಲ್ಲಿ ಕುಟುಂಬಸ್ಥರು ಇಲ್ಲದಿರುವುದು ಬೇಸರ ತಂದಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಗೆಳತಿ ತ್ರಿಷಾ ಬಂದಿದ್ದಕ್ಕೆ ವಿಜಯ್ ಪತ್ನಿ ಸಮಾರಂಭದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
27 ವರ್ಷಗಳ ದಾಂಪತ್ಯದ ಬಳಿಕ ಸಂಗೀತಾ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಜಯ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. 1999ರಲ್ಲಿ ವಿಜಯ್ ಮತ್ತು ಸಂಗೀತಾ ವಿವಾಹವಾಗಿದ್ದರು. ಅವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

