– ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಅಸಾಧ್ಯ
ಮೈಸೂರು: ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಿದೆ. ಸಾಮಾಜಿಕ ಸ್ವಾತಂತ್ರ್ಯ ನೆಲೆಗೊಳ್ಳದೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ಆರ್‌ಎಸ್‌ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಸುತ್ತೂರು(Sutturu) ಶಾಖಾ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,” ನಮ್ಮ ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಸಮಾಜದಲ್ಲಿ ಸಮಾನತೆ ನೆಲೆಸಲು ನಮ್ಮ ಮನಸ್ಸಿನೊಳಗಿನ ಭೇದವೆಂಬ ಕಲ್ಮಶವನ್ನು ಮೊದಲು ತೆಗೆದುಹಾಕಬೇಕು. ಮೇಲು-ಕೀಳು ಎಂಬ ಮನೋಭಾವ ಅಳಿದು, ‘ಸರ್ವರೂ ಒಂದೇ’ ಎಂಬ ಏಕಭಾವ ಭಾರತೀಯರಲ್ಲಿ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಗುಣಗಳು ಫ್ರೆಂಚ್ ಕ್ರಾಂತಿಯಿಂದ ಬಂದವುಗಳಲ್ಲ. ಈ ಪರಿಕಲ್ಪನೆಗಳು ಮೂಲತಃ ಭಾರತದ್ದೇ(India) ಆಗಿವೆ. ವಿಭಿನ್ನತೆಯು ವ್ಯಕ್ತಿಗತವಾಗಿ ಎಲ್ಲರಲ್ಲೂ ಇರುತ್ತದೆ, ಆದರೆ ಅದೇ ನಮ್ಮ ನಡುವಿನ ಅಂತರಕ್ಕೆ ಕಾರಣವಾಗಬಾರದು ಎಂದು ಹೇಳಿದರು.
ಸಚ್ಚಿತ್ತತೆ ಬರಬೇಕೆಂದರೆ ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ಎಲ್ಲರೂ ನಮ್ಮವರೇ ಎಂಬ ಭಾವ ಬಂದಾಗ ಸಮಾಜದ ವಿಕಾಸ ತಂತಾನೇ ಆಗುತ್ತದೆ. ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು ಎಂದರು.
ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚಾತ್ಯ ಪರಿಕಲ್ಪನೆ. ಆದರೆ ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆಯನ್ನು ಕಟ್ಟಿದ್ದಾರೆ. ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿ ಎಂಬುದು ನಮ್ಮ ಸಮಾಜದ ನಂಬಿಕೆ ಎಂದು ಹೇಳಿದರು.
ಧರ್ಮವು ಮಾನವನ ಸರ್ವಾಂಗೀಣ ಪ್ರಗತಿಯ ಅಡಿಪಾಯ. ಸೌಹಾರ್ದತೆಯು ಹಿತವಾದ ಸಂಗೀತದಂತೆ ಇರಬೇಕು. ನಾವು ಸಂಯಮ ಕಳೆದುಕೊಂಡರೆ ಏಕಭಾವ ಮೂಡುವುದಿಲ್ಲ. ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ ಮತ್ತು ಕರುಣೆ ನಮ್ಮಲ್ಲಿ ಮೂಡಬೇಕು. ಈ ತ್ಯಾಗದಲ್ಲೇ ನಿಜವಾದ ಸೌಹಾರ್ದತೆ ಅಡಗಿದೆ ಎಂದು ಅವರು ತಿಳಿಸಿದರು.

