ಮಂಡ್ಯ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗಬೇಕು ಎಂಬ ಬೇಡಿಕೆ ಬಾರಿ ಚರ್ಚೆಗೆ ಬರುತ್ತದೆಯಾದರೂ ಕಟ್ಟು ನಿಟ್ಟಿನ ನಿರ್ಧಾರ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಸಾಧ್ಯವಾಗಿಲ್ಲ. ಆದರೆ ಮಂಡ್ಯ ತಾಲೂಕಿನ ಉಪ್ಪರಾಕನಹಳ್ಳಿ ಹಳ್ಳಿಯಲ್ಲಿ ಗ್ರಾಮಸ್ಥರು ಕಟ್ಟು ನಿಟ್ಟಿನ ನಿರ್ಧಾರವನ್ನು ಕೈಗೊಂಡಿದ್ದು, ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಮಾತ್ರವಲ್ಲದೇ, ಸೇವನೆಯನ್ನು ನಿಷೇಧ ಮಾಡಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಅಪ್ಪಿತಪ್ಪಿ ಕುಡಿದು ಸಿಕ್ಕಿ ಬಿದ್ದರೆ 10 ಸಾವಿರ ರೂ. ದಂಡ ವಿಧಿಸುವ ನಿಯಮವನ್ನು ಗ್ರಾಮಸ್ಥರು ರೂಪಿಸಿದ್ದಾರೆ. ಯಾರಾದರೂ ಕದ್ದು ಮುಚ್ಚಿ ನಿಯಮ ಮುರಿಯುತ್ತಿದ್ದರಾ ಎಂಬುವುದನ್ನು ಪತ್ತೆಹಚ್ಚಲು 20 ಮನೆಗಳಿಗೆ 5 ಜನರಂತೆ ಒಂದು ಕಾವಲು ಪಡೆಯನ್ನು ರಚಿಸಿಕೊಂಡಿದ್ದಾರೆ. ಕುಡಿದು ಬಂದಿದ್ದಾರೆ ಎಂಬ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ಬಹುಮಾನವನ್ನು ನೀಡಲಾಗುವುದಂತೆ.
Advertisement
Advertisement
ಸುಮಾರು 250 ಮನೆಗಳಿರುವ ಈ ಉಪ್ಪರಕನಹಳ್ಳಿ ಗ್ರಾಮದಲ್ಲಿ ಸುಮಾರು 1,500 ಜನಸಂಖ್ಯೆ ಹೊಂದಿದ್ದಾರೆ. ಇಲ್ಲಿನ ಜನರ ಕಸುಬು ವ್ಯವಸಾಯವಾಗಿದ್ದು ಬಹುತೇಕ ಕುಟುಂಬಸ್ಥರು ಜಮೀನು ಹೊಂದಿದ್ದಾರೆ. ಎಲ್ಲಾ ಹಳ್ಳಿಗಳಲ್ಲಿರುವಂತೆ ಇಲ್ಲೂ ಸಹ ಮದ್ಯ ಮಾರಾಟ ಜೋರಾಗಿಯೇ ನಡೆಯುತ್ತಿತ್ತು. ಜನರೂ ಸಹ ರಾಜಾರೋಷವಾಗಿ ಕುಡಿಯುತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಈ ಊರಿನ ಕೆಲವರು ಪಾಲ್ಗೊಂಡಿದ್ದರು. ಅಲ್ಲಿ ಜ್ಞಾನೋದಯವಾದ ನಂತರ ನಮ್ಮ ಊರಿನಲ್ಲೂ ಯಾಕೆ ಮಧ್ಯಮಾರಾಟ ನಿಷೇಧಿಸಬಾರದು ಎಂಬ ನಿರ್ಧಾರಕ್ಕೆ ಬಂದ ಗ್ರಾಮಸ್ಥರು ಕಳೆದ 1 ತಿಂಗಳ ಹಿಂದೆ ಎಲ್ಲಾ ಮುಖಂಡರೂ ಒಂದೆಡೆ ಸೇರಿ ಗ್ರಾಮದಲ್ಲಿ ಮಧ್ಯ ಮಾರಾಟ, ಮದ್ಯ ಸೇವನೆಯನ್ನು ನಿಷೇಧ ಮಾಡಿ ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.
Advertisement
Advertisement
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಬಂದ ನಂತರ ಗ್ರಾಮದ ಹಲವರು ಈಗಾಗಲೇ ಮಧ್ಯವನ್ನು ಬಿಟ್ಟಿದ್ದಾರೆ. ಗ್ರಾಮಸ್ಥರ ದೃಢನಿರ್ಧಾರದಿಂದಾಗಿ ಮದ್ಯಮಾರಾಟವಾಗಲಿ, ಮದ್ಯ ಸೇವನೆ ಮಾಡಿರುವ ಪ್ರಕರಣವಾಗಲಿ ಕಳೆದ 1 ತಿಂಗಳಿನಿಂದ ಬೆಳಕಿಗೆ ಬಂದಿಲ್ಲ. ಕುಡಿತವನ್ನು ತಮ್ಮ ಊರಿನಿಂದಲೇ ಹೊರ ಹಾಕುವ ಸಂಕಲ್ಪ ಮಾಡಿರುವ ಗ್ರಾಮಸ್ಥರ ನಿರ್ಧಾರ ಎಲ್ಲರ ಮೆಚ್ಚಿಗೆಗೂ ಪಾತ್ರವಾಗಿದೆ.