ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಗೆ (B.K Hariprasad) ನೋಟಿಸ್ ನೀಡಲಾಗಿದೆ.
ಎಐಸಿಸಿ (AICC) ಶಿಸ್ತು ಸಮಿತಿಯಿಂದ ಈ ನೋಟಿಸ್ ನೀಡಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲು ಬಿಡಲ್ಲ – HD ರೇವಣ್ಣ ಗುಡುಗು
ಏನಿದು ಘಟನೆ..?: ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹರಿಪ್ರಸಾದ್ ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ದೇವರಾಜು ಅರಸು ಆಗುವುದಿಲ್ಲ, ಅವರ ಚಿಂತನೆ ಇರಬೇಕು ಎಂದಿದ್ದರು.
ನಾನು ಅಧಿಕಾರ ಸಿಕ್ಕಿಲ್ಲವೆಂದು ಅಡ್ವಾಣಿ ಅವರನ್ನು ಭೇಟಿ ಮಾಡಿ, ಅವರ ಮನೆಯಲ್ಲಿ ಉಪಹಾರ ಸ್ವೀಕರಿಸಿ ಬಿಜೆಪಿ ಸೇರಲು ಹೋಗಿರಲಿಲ್ಲ. ಯಾರು ಹೋಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದ್ದ ವೆಂಕಯ್ಯ ನಾಯ್ಡು ಹಾಗೂ ಅರವಿಂದ ಲಿಂಬಾವಳಿ ಈಗಲೂ ಇದ್ದಾರೆ ಎಂದು ಹೇಳಿದ್ದರು.
ಈ ಸಂಬಂಧ ಹೈಕಮಾಂಡ್ ಬಳಿ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹರಿಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
Web Stories