ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ನಡುವೆ, ಭವಿಷ್ಯದಲ್ಲಿ ಎಐ ತನ್ನಷ್ಟಕ್ಕೆ ತಾನೇ ಹೊಸ ಎಐ ವ್ಯವಸ್ಥೆಗಳನ್ನು ನಿರ್ಮಿಸುವ ಮಟ್ಟಕ್ಕೆ ಬೆಳೆಯಬಹುದು ಎಂದು ಅಮೆರಿಕದ ಎಐ ಕಂಪನಿ ಆ್ಯಂಥ್ರೋಪಿಕ್ ಎಚ್ಚರಿಕೆ ನೀಡಿದೆ.
ಕ್ಲಾಡ್ (Claude) ಎಂಬ ಎಐ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಆ್ಯಂಥ್ರೋಪಿಕ್, “Recursive Self-Improvement” (ಪುನರಾವರ್ತಿತ ಸ್ವಯಂ-ಸುಧಾರಣೆ) ಎಂಬ ಹೊಸ ಹಂತದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಂದರೆ, ಮಾನವ ಸಹಾಯವಿಲ್ಲದೆ ಎಐ ತನ್ನ ಸಾಮರ್ಥ್ಯವನ್ನು ತಾನೇ ಹೆಚ್ಚಿಸಿಕೊಳ್ಳುವ ಮತ್ತು ತನ್ನ ಮುಂದಿನ ಆವೃತ್ತಿಯನ್ನು ತಾನೇ ನಿರ್ಮಿಸುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: ಐಫೋನ್ 18 ಬಳಿಕ ಐಫೋನ್ 20 ಮಾರುಕಟ್ಟೆಗೆ – 19ರ ಸರಣಿ ಮಾರುಕಟ್ಟೆಗೆ ಬರಲ್ಲ ಯಾಕೆ?
ಎಐ ಹೊಸ ತಂತ್ರಜ್ಞಾನದಿಂದ ಪ್ರತಿ ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಸಂಕೀರ್ಣ ಕೆಲಸದವರೆಗೂ ಸಹಾಯಕ್ಕೆಂದು ಕೃತಕ ಬುದ್ದಿಮತ್ತೆಯನ್ನು ಬಳಸಲಾಗುತ್ತಿದೆ. ಆದರೆ ಮುಂದೆ ಈ ಕೆಲಸಗಳನ್ನು ಮಾಡಲು ಎಐ ತನ್ನದೇ ಒಂದು ಉತ್ತರಾಧಾಕಾರಿ ರೂಪದಲ್ಲಿ ಮಿನಿ ಎಐ ಸೃಷ್ಟಿಸಬಹುದು ಎಂದು ಕಂಪನಿ ತಿಳಿಸಿದೆ.
ಮೇ 2026ರ ವೇಳೆಗೆ ಕಂಪನಿಯ ಪ್ರೊಡಕ್ಷನ್ ಕೋಡ್‌ಬೇಸ್‌ಗೆ ಸಂಬಂದಿಸಿದ ಶೇಕಡಾ 80ಕ್ಕೂ ಹೆಚ್ಚು ಕೋಡ್‌ಗಳನ್ನು ಕ್ಲಾಡ್ AI ತಾನೇ ಬರೆದಿದೆ ಎಂದು ಆ್ಯಂಥ್ರೋಪಿಕ್ ಬಹಿರಂಗಪಡಿಸಿದೆ.
AI ತನ್ನಷ್ಟಕ್ಕೆ ತಾನೇ ಬೆಳೆಯುವ ಸಾಮರ್ಥ್ಯ ಪಡೆದರೆ ವಿಜ್ಞಾನ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರಬಹುದು. ಆದರೆ ಅದೇ ಸಮಯದಲ್ಲಿ ಅದರ ಮೇಲಿನ ಮಾನವ ನಿಯಂತ್ರಣ ಕಡಿಮೆಯಾಗುವ ಅಪಾಯವೂ ಇದೆ ಎಂದು ಕಂಪನಿ ಎಚ್ಚರಿಸಿದೆ.
AI ವ್ಯವಸ್ಥೆಗಳು ತಮ್ಮ ಮುಂದಿನ ಆವೃತ್ತಿಯನ್ನು ತಾವೇ ನಿರ್ಮಿಸಲು ಆರಂಭಿಸಿದರೆ, ಅವುಗಳನ್ನು ಮೇಲ್ವಿಚಾರಣೆ ಮಾಡುವುದು, ಸುರಕ್ಷಿತವಾಗಿಡುವುದು ಹಾಗೂ ಮಾನವ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದರ ಬಗ್ಗೆ ಭವಿಷ್ಯದಲ್ಲಿ ಹೆಚ್ಚು ಗಮನ ವಹಿಸಬೇಕಾಗುತ್ತದೆ. ಇದನ್ನೂ ಓದಿ: ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ – ಉಲ್ಲಂಘಿಸಿದ್ರೆ 23 ಕೋಟಿ ದಂಡ
ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ AI ಕಂಪನಿಗಳು ಒಟ್ಟಾಗಿ ಮುಂದಿನ ತಲೆಮಾರಿನ AI ಅಭಿವೃದ್ಧಿಯನ್ನು ಕೆಲಕಾಲ ನಿಧಾನಗೊಳಿಸುವ ಅಥವಾ ತಾತ್ಕಾಲಿಕವಾಗಿ ವಿರಾಮ ನೀಡುವ ಬಗ್ಗೆ ಚರ್ಚಿಸಬೇಕು ಎಂದು ಆ್ಯಂಥ್ರೋಪಿಕ್ ಸಲಹೆ ನೀಡಿದೆ. ಆದರೆ ಈಗಾಗಲೇ ಕೃತಕ ಬುದ್ದಿಮತ್ತೆಯನ್ನು ಪ್ರತಿ ಕ್ಷೇತ್ರದಲ್ಲೂ ಬಹುತೇಕ ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಎಲ್ಲಾ ಕಂಪನಿಗಳನ್ನು ಒಂದೇ ನಿರ್ಧಾರಕ್ಕೆ ಒಪ್ಪಿಸುವುದು ಸುಲಭವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಕೆಲವು ತಜ್ಞರು AI ಎಷ್ಟೇ ಶಕ್ತಿಶಾಲಿಯಾದರೂ ಅಂತಿಮ ನಿಯಂತ್ರಣ ಮನುಷ್ಯರ ಕೈಯಲ್ಲೇ ಇರುತ್ತದೆ. ಅಗತ್ಯವಿದ್ದರೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಬಹುದು ಎಂದು ಹೇಳಿದ್ದಾರೆ. ಆದರೂ AI ತಂತ್ರಜ್ಞಾನ ಮತ್ತಷ್ಟು ಸ್ವಾಯತ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಸುರಕ್ಷತೆ, ನಿಯಂತ್ರಣ ಮತ್ತು ಸಮರ್ಪಕ ನಿರ್ವಹಣೆಯ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.
