ಹಾಸನ: ಅಕ್ಕಿ (Rice) ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ.ಐ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆಯುತ್ತಾರೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಕಿಡಿಕಾರಿದರು.
Advertisement
ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ನವದೆಹಲಿಗೆ ಭೇಟಿ ನೀಡಿದಾಗ ಕೇಂದ್ರ ಗೃಹಸಚಿವ ಅಮಿತ್ ಶಾ (Amitshah) ಅವರ ಗಮನಕ್ಕೆ ತರಲಾಗಿದೆ. ಬಡವರ ಮೇಲೆ ಗದಾ ಪ್ರಹಾರ ಮಾಡಲಾಗುತ್ತಿದೆ. ನಾವು ಘೋಷಣೆ ಮಾಡಿದಂತೆಯೇ ಅಕ್ಕಿ ಕೋರಿ ಪತ್ರ ಬರೆಯಲಾಗಿದೆ. ಅವರು ಒಪ್ಪಿ ಪತ್ರವನ್ನೂ ಬರೆದಿದ್ದಾರೆ. ನಾವು ಘೋಷಣೆ ಮಾಡುವ ಮುನ್ನ ಯಡಿಯೂರಪ್ಪ (BS Yediyurappa), ಅಶೋಕ್ (R Ashok) ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತೇ ಎಂದು ಪ್ರಶ್ನಿಸಿದರು.
Advertisement
Advertisement
ಬಿಜೆಪಿ (BJP) ಬಡವರ ವಿರೋಧಿ ಪಕ್ಷ. ಅಕ್ಕಿ ಪಡೆಯಲು ನಮ್ಮ ಪ್ರಯತ್ನ ಜಾರಿಯಲ್ಲಿದೆ. ನ್ಯಾಫೆಡ್, ಕೇಂದ್ರೀಯ ಭಂಡಾರ್, ಎನ್.ಸಿ.ಸಿಎಫ್ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಬುಧವಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಎಲ್ಲಿಯೂ ಅಗತ್ಯವಿರುಷ್ಟು ಅಕ್ಕಿ ದೊರೆಯುತ್ತಿಲ್ಲ. ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿಗೆ ತರಲಾಗುವುದು ಎಂದರು.
Advertisement
ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ: ಗ್ಯಾರಂಟಿ ಯೋಜನೆಗಳು ಜಾರಿಯಾಗದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬೀದಿಗಿಳಿದು ಹೋರಾಟ ಮಾಡಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ರಾಜಕೀಯ ಗಿಮಿಕ್ ಮಾಡಲು ಹೊರಡಬಾರದು. ಅವರಿಗೆ ನಿಜವಾಗಿಯೂ ಬದ್ಧತೆಯಿದ್ದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ ಎಂದರು.
ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ: 2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು. 2.50 ಲಕ್ಷ ಹುದ್ದೆಗಳನ್ನು ಒಂದೇ ಸಾರಿಗೆ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರೆಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59,000 ಕೋಟಿ ರೂ. ಬೇಕಾಗುವುದು. ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದರು.