– ಸೋಂಕಿತರಿದ್ದ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣನೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಡೆಂಗ್ಯೂ ಬೆನ್ನಲ್ಲೇ ಝಿಕಾ ವೈರಸ್ (Zika Virus) ಕೂಡ ನಗರಕ್ಕೆ ಕಾಲಿಟ್ಟಿದೆ. ಆನೇಕಲ್ ತಾಲೂಕು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿಯಲ್ಲಿ (Jigani) ಎರಡು ವಾರಗಳಲ್ಲಿ ಒಟ್ಟು 5 ಝಿಕಾ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಸೋಂಕು ಕಾಣಿಸಿಕೊಂಡ ಹಿನ್ನೆಲೆ ರೋಗಿಗಳು ಹಾಗೂ ಕುಟುಂಬಸ್ಥರ ರಕ್ತದ ಸ್ಯಾಂಪಲ್‌ಗಳನ್ನು ಪಡದುಕೊಂಡು ಆರೋಗ್ಯ ಇಲಾಖೆ ಸೋಂಕಿತರ ಮೇಲೆ ನಿಗಾ ವಹಿಸಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 7 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಿ ಆರೋಗ್ಯ ಇಲಾಖೆ (Health Department) ನಿಗಾ ವಹಿಸುತ್ತಿದೆ. ಇದನ್ನೂ ಓದಿ: ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಅಮಿತ್ ಶಾ
ಈಡಿಸ್ ಸೊಳ್ಳೆಯಿಂದ ಝಿಕಾ ವೈರಸ್ ಹರಡುತ್ತದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ ದದ್ದುಗಳು ಕಾಣಿಸಿಕೊಳ್ಳುವುದು ಝಿಕಾ ವೈರಸ್‌ನ ಗುಣಲಕ್ಷಣ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: Maharashtra: ಶಾಲೆಯಲ್ಲಿ ಬಿಸ್ಕೆಟ್ ತಿಂದು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಝಿಕಾ ವೈರಸ್ ದೃಢಪಟ್ಟರೆ, ಕುಟುಂಬದ ಸದಸ್ಯರ ರಕ್ತದ ಮಾದರಿಯನ್ನು ಲ್ಯಾಬ್ ಟೆಸ್ಟ್‌ಗೆ ಒಳಪಡಿಸಬೇಕು. ಮನೆಯ ಸುತ್ತಮುತ್ತಲಿನ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ. ಆ ಪ್ರದೇಶದ ಒಂದು ಕಿಲೋ ಮೀಟರ್ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು. ಝಿಕಾ ವೈರಸ್ ನಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ; ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರೋದು ನಿಜ – ಪರಮೇಶ್ವರ್