ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಟೀಮ್ ಮತ್ತೆ ಟಿಕೆಟ್ (Ticket) ದರವನ್ನು ಇಳಿಸಿದೆ. ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಿದೆ. 500 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ಮಾಡಿರುವ ಸಿನಿಮಾಗೆ ಈವರೆಗೂ ಬಂದ ಕಲೆಕ್ಷನ್ ಕೇವಲ 450 ಕೋಟಿ ರೂಪಾಯಿ. ಇದರಲ್ಲಿ ನಿರ್ಮಾಪಕರಿಗೆ ಸೇರೋದು ಅರ್ಧಕರ್ಧ. ಹಾಗಾಗಿ ಹಾಕಿದ ಬಂಡವಾಳ ವಾಪಸ್ಸು ಪಡೆಯುವುದಕ್ಕೆ ಏನೆಲ್ಲ ತಾಲೀಮು ಮಾಡಬೇಕಾಗಿದೆ.
ದಿನದಿಂದ ದಿನಕ್ಕೆ ಕಲೆಕ್ಷನ್ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ ಚಿತ್ರತಂಡ. 112 ರೂಪಾಯಿ ಇದೀಗ ನೀವು ಆದಿಪುರುಷ ಸಿನಿಮಾವನ್ನು ನೋಡಬಹುದಾಗಿದೆ. ಅಲ್ಲದೇ, ವಿವಾದಿತ ಸಂಭಾಷಣೆ ಸೇರಿದಂತೆ ಹಲವು ಬದಲಾವಣೆಗಳನ್ನು ಚಿತ್ರತಂಡ ಮಾಡಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ಘೋಷಣೆ ಮಾಡಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
ಆದಿಪುರುಷ (Adipurush) ಸಿನಿಮಾಗೆ ನಿರೀಕ್ಷೆ ಫಲಿತಾಂಶ ಬಾರದೇ ಇದ್ದರೂ, ಪ್ರಭಾಸ್ ಅವರ ಡಿಮ್ಯಾಂಡ್‌ಗೆ ಯಾವುದೇ ಧಕ್ಕೆ ಬಂದಿಲ್ಲ ಎಂದೇ ಹೇಳಬಹುದು. ಸದ್ಯ ಅವರ ಕೈಯಲ್ಲಿ ಎರಡು ಚಿತ್ರಗಳು ಇದ್ದರೂ, ಮತ್ತೊಂದು ಚಿತ್ರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಕನ್ನಡದ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ವಿಶೇಷ.
ಈಗಾಗಲೇ ಪ್ರಭಾಸ್ (Prabhas) ನಟನೆಯ ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿಕೆ ಮಾಡಿದೆ. ಕನ್ನಡದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ನಂತರ ಪ್ರಭಾಸ್ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ಗ್ನಿನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಡಿ ಸೇರಿದಂತೆ ಹಲವು ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ (KVN Production) ಸಂಸ್ಥೆಯು ಪ್ರಭಾಸ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಭಾಸ್ ಜೊತೆ ಸಂಸ್ಥೆಯ ಮುಖ್ಯಸ್ಥರು ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಪ್ರಭಾಸ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಕೇವಲ ಪ್ರಭಾಸ್ ಒಪ್ಪಿದ್ದಷ್ಟೇ ಅಲ್ಲ, ಈ ಸಿನಿಮಾದ ನಿರ್ದೇಶಕರು ಯಾರು ಎನ್ನುವ ಮಾಹಿತಿಯೂ ಸೋರಿಕೆಯಾಗಿದೆ. ಗಬ್ಬರ್ ಸಿಂಗ್ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಹರೀಶ್ ಶಂಕರ್ (Harish Shankar) ಈ ಸಿನಿಮಾಗೆ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಷಯಗಳು ಹರಿದಾಡುತ್ತಿದ್ದರೂ, ಯಾರೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.