ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಕೊನಿಡೆಲಾ- ಚೈತನ್ಯ ಜಿವಿ ಡಿವೋರ್ಸ್ ಆಗಿರೋದನ್ನ ಖಚಿತಪಡಿಸಿದ್ದಾರೆ. ಕೆಲ ತಿಂಗಳುಗಳಿಂದ ನಿಹಾರಿಕಾ (Niharika) ದಾಂಪತ್ಯ ಬದುಕು ಸರಿಯಿಲ್ಲ ಎಂಬ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈ ಎಲ್ಲಾ ಸುದ್ದಿಗೂ ನಟಿ ನಿಹಾರಿಕಾ, ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಉತ್ತರಿಸಿದ್ದಾರೆ. ಪತಿ ಜೊತೆ ಬೇರೆ ಆಗಿರೋದ್ದರ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಮೆಗಾಸ್ಟಾರ್ ಮನೆಯ ಮುದ್ದಿನ ಮಗಳು ನಿಹಾರಿಕಾ ಅವರ ಮದುವೆಯನ್ನ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಹಲವು ವರ್ಷಗಳ ಪ್ರೀತಿ, ಎರಡೂವರೆ ವರ್ಷದ ದಾಂಪತ್ಯಕ್ಕೆ ಈಗ ಬ್ರೇಕ್ ಬಿದ್ದಿದೆ. ನಿಹಾರಿಕಾ- ಚೈತನ್ಯ ಇಬ್ಬರು ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು- ಚೈತನ್ಯ ಬೇರೆಯಾಗಬೇಕು ಎಂದು ನಿರ್ಧರಿಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಜೊತೆಯಾಗಿರೋದ್ದಕ್ಕೆ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಡಲು ನಮ್ಮ ಪ್ರೈವೆಸಿಯನ್ನ ಗೌರವಿಸಿ ಎಂದು ನಟಿ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಕಾಮೆಂಟ್ ಬಾಕ್ಸ್ ಆಫ್ ಮಾಡಿ, ಡಿವೋರ್ಸ್ ಆಗಿರೋದನ್ನ ನಟಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:‘ತೇಜಸ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ ಕಂಗನಾ
ಟಾಲಿವುಡ್‌ನ (Tollywood) ನಟ ಚಿರಂಜೀವಿ (Megastar Chiranjeevi) ಅವರ ಸಹೋದರ, ನಟ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ತಿಳಿಸಿರಲಿಲ್ಲ. ಇದೀಗ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ನಿಹಾರಿಕಾ- ಚೈತನ್ಯ(Chaitanya) ದಾಂಪತ್ಯ ಬದುಕು ಅಂತ್ಯಗೊಂಡಿದ್ದು, ಈಗಾಗಲೇ ಇಬ್ಬರಿಗೂ ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್‌ಗೆ ಮಂಜೂರು ನೀಡಿದೆ. ಆದರೆ ಈ ಡಿವೋರ್ಸ್‌ಗೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ.
ನಟಿ ನಿಹಾರಿಕಾ ಅವರ ಮದುವೆಯು ಪ್ರಭಾಕರ್ ರಾವ್ ಅವರ ಪುತ್ರ ಚೈತನ್ಯ ಜೊನ್ನಲಗಡ್ಡ ಅವರ ಜೊತೆ 2020ರ ಡಿಸೆಂಬರ್ 9ರಂದು ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿನ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಮೆಗಾ ಸ್ಟಾರ್ ಕುಟುಂಬವು ಮದುವೆಗೆ ಹಾಜರಾಗಿತ್ತು. ವೈಭವದಿಂದ ನಡೆದಿತ್ತು. ಈ ಮದುವೆಯಲ್ಲಿ ಇಡೀ ಕುಟುಂಬವು ಹಾಡಿ ಕುಣಿದಿತ್ತು. ಆದರೆ ನಿಹಾರಿಕಾ ಅವರ ಮದುವೆ ಕೇವಲ ಎರಡೂವರೆ ವರ್ಷಗಳಲ್ಲಿ ಮುರಿದುಬಿದ್ದಿರುವುದು ಬೇಸರದ ಸಂಗತಿ.
ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ ಮತ್ತು ಚೈತನ್ಯ ಇನ್ಸ್ಟಾಗ್ರಾಂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ಇದೀಗ ವದಂತಿ ನಿಜವಾಗಿದೆ.
ಇದರ ಜೊತೆ ಮೆಗಾ ಫ್ಯಾಮಿಲಿ ನಟ ಪವನ್ ಕಲ್ಯಾಣ್ ಮೂರನೇ ಮದುವೆಯೂ ಮುರಿದುಬಿತ್ತಾ? ಹೀಗೊಂದು ಅನುಮಾನ ಕಾಡುತ್ತಿದೆ. ಟಾಲಿವುಡ್ ಸ್ಟಾರ್ ಪವನ್ ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿದ್ದು, ಮೂರನೇ ಮದುವೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಡಿದರೆ ಮೂರನೇ ಪತ್ನಿಗೂ ಡಿವೋರ್ಸ್ ನೀಡಿದ್ದಾರಾ ಎನ್ನುವ ಗುಮಾನಿ ಎದ್ದಿದೆ. ಒಟ್ನಲ್ಲಿ ಪವನ್ ಕಲ್ಯಾಣ್, ಶ್ರೀಜಾರಂತೆಯೇ ನಿಹಾರಿಕಾ ಕೂಡ ದಾಂಪತ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.