ಬೆಂಗಳೂರು: ದಕ್ಷಿಣ ಭಾರತದ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಗೆಳೆಯ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕಾಲಿವುಡ್‍ನಲ್ಲಿ ಕೇಳಿಬರುತ್ತಿದೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿತ್ತು. ವಿಘ್ನೇಶ್ ಶಿವನ್ ಗೆಳತಿ ನಯನತಾರಾ ಜೊತೆಗೆ ಇರುವ ಅನೇಕ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಜೋಡಿ ಪಾರ್ಟಿ, ಸಿನಿಮಾ ಪ್ರಚಾರ, ಕುಟುಂಬದ ಜೊತೆ ಕಳೆದ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ಜೊತೆಗೆ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರಂತೆ. ಈ ವಿವಾಹವು ವಿದೇಶದಲ್ಲಿ ನಡೆಯಲಿದೆ. ಆದರೆ ಮದುವೆಗೆ ಆತ್ಮೀಯರು, ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಜೋಡಿಯು ಹಿಂದೂ ಸಂಪ್ರದಾಯದಂತೆ ಅಥವಾ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಅಷ್ಟೇ ಅಲ್ಲದೆ ಮದುವೆ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಮದುವೆಯಲ್ಲಿ ಕಾಲಿವುಡ್ ಹಾಗೂ ಟಾಲಿವುಡ್‍ನ ನಟ, ನಟಿಯರು ಹಾಗೂ ತಂತ್ರಜ್ಞರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
2019 ಹೊಸ ವರ್ಷಾಚರಣೆಗಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಲಾಸ್ ವೆಗಾಸ್‍ಗೆ ಹೋಗಿದ್ದರು. ಈ ಸುಂದರ ಕ್ಷಣವನ್ನು ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನಯನತಾರಾ, ವಿಘ್ನೇಶ್ ಮತ್ತು ನಾನು ಆತ್ಮೀಯರಾಗಿರುವುದು ನಿಜ. ನಮ್ಮ ನಡುವೆ ಪ್ರೀತಿ ಇರುವುದೂ ನಿಜ. ಶೀಘ್ರದಲ್ಲಿಯೇ ನಿಮಗೆಲ್ಲರಿಗೂ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂದು ಹೇಳಿದ್ದರು.
ನಯನತಾರಾ ಕಾಲಿವುಟ್ ನಟ ದಳಪತಿ ವಿಜಯ್ ಜೊತೆಗೆ ‘ಬಿಗಿಲ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 27ರಂದು ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ ಬಹು ನಿರೀಕ್ಷಿತ ಹಾಗೂ ಬಹು ಕೋಟಿ ವೆಚ್ಚದ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಕೂಡ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಸಿನಿಮಾ ಅಭಿಮಾನಿಗಳ ಕುತೂಹಲ ಕೆರಳಿಸಿದೆ.