ಶ್ರೀರಾಮ ಕುರಿತು ಕವಿತೆ ಬರೆದು ಕೊಂಡಾಡಿದ ಕಿಚ್ಚ

Public TV
2 Min Read
sudeep 5

ಲ್ಲೆಲ್ಲೂ ರಾಮನ ಜಪ ಜೋರಾಗಿದೆ. ಇಂದು ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಹಲವು ಸ್ಟಾರ್‌ಗಳು ಈ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ರಾಮನಿಗೆ ನಮನ ಸಲ್ಲಿಸಿದರು. ಇನ್ನೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ರಾಮನ ಕುರಿತು ಅಭಿಪ್ರಾಯ ತಿಳಿಸಿದ್ದರು. ಇದೀಗ ಶ್ರೀರಾಮನ ನಮಿಸುತ್ತ ಸುದೀಪ್ (Sudeep), ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ತಿಳಿಸಿದ್ದಾರೆ. ರಾಮನ ಕುರಿತು ಕವಿತೆ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಜ.27ಕ್ಕೆ ‘ವಿಷ್ಣುಪ್ರಿಯ’ ಚಿತ್ರದ ಸಾಂಗ್ ರಿಲೀಸ್

ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು. ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ ನಿನ್ನ ಕೀರ್ತನೆಗೆ ಎರಡೇ ಕಿವಿಗಳು. ನಮ್ಮದು ಎಂತಹ ಪುಣ್ಯ, ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ, ಅರುಣ್ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು. ನಿನ್ನ ಪರಮ ಭಕ್ತ ಕವಚದ ಮಣ್ಣಿನ ವೀರ ಹನುಮನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ. ‘ಜೈ ಶ್ರೀ ರಾಮ್’ ಎಂದು ಕವಿತೆಯನ್ನು ಸುದೀಪ್ (Sudeep) ಬರೆದಿದ್ದಾರೆ. ಈ ಕ್ಷಣಕ್ಕಾಗಿ ಧನ್ಯವಾದ ಮೋದಿಜೀ ಎಂದು ಕೂಡ ಸುದೀಪ್ ಹೇಳಿದ್ದಾರೆ.

ಈ ಹಿಂದಿನ ಪೋಸ್ಟ್‌ನಲ್ಲಿ ಶ್ರೀರಾಮನಿಗೆ ಸುದೀಪ್ ನಮಿಸಿದ್ದಾರೆ. ರಾಮನ ಭುಜಗಳು ನಮ್ಮ ಶಕ್ತಿ, ಅವರ ಎದೆ ನಮ್ಮ ಮಹತ್ವಾಕಾಂಕ್ಷೆ, ಅವರ ಕೈಗಳು ನಮ್ಮ ಶೌರ್ಯ, ಅವರ ಪಾದಗಳು ನಮ್ಮ ಮೋಕ್ಷ, ಅವರ ರೂಪ ಎಲ್ಲ ಸೃಷ್ಟಿಯ ಸಾರ. ಇಲ್ಲಿಂದ ಅದು ಪ್ರಾರಂಭವಾಗಿದೆ, ಇಲ್ಲಿಂದ ನಾವು ಏಳ್ಗೆ ಹೊಂದುತ್ತೇವೆ. ಇದು ಒಂದು ರಾಷ್ಟ್ರದ ಪ್ರಾಣ ಪ್ರತಿಷ್ಠಾಪನೆ, ಜನರ ಪ್ರಾಣ ಪ್ರತಿಷ್ಠಾಪನೆ, 500 ವರ್ಷಗಳ ಕತ್ತಲೆಯ ನಂತರ ಬೆಳಕಿನ ಪ್ರಾಣ ಪ್ರತಿಷ್ಠಾಪನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ. ರಾಮನ ಫೋಟೋ ಚಿತ್ರದ ಮುಂದೆ ದೀಪ ಹಚ್ಚುತ್ತಿರುವ ವಿಡಿಯೋವನ್ನು ನಟ ಕಿಚ್ಚ ಸುದೀಪ್ ಅವರು ಹಂಚಿಕೊಂಡಿದ್ದಾರೆ.

ಅಯೋಧ್ಯೆಯ ರಾಮಮಂದಿರ (Ram Mandir) ಸಂಭ್ರಮದಲ್ಲಿ ಸುದೀಪ್ ಭಾಗಿಯಾಗಿಲ್ಲವಾದರೂ ಶ್ರೀರಾಮನಿಗೆ ಕವಿತೆ ಬರೆದಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸುದೀಪ್ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

Share This Article