ಬೆಂಗಳೂರು: ನಟರ ಅಭಿಮಾನಿಗಳು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಅಂತಹದ್ದೆ ಕೆಲಸವನ್ನು ನಟ ಸುದೀಪ್ ಅವರ ಅಭಿಮಾನಿಗಳು ಮಾಡಿದ್ದಾರೆ.
ಸುದೀಪ್ ಅಭಿಮಾನಿಗಳು ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡುವ ಮೂಲಕ ಆತನ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ. ಅಪರಿಚಿತನಾದ ಗಣೇಶ್ ಗೆ ಕಿಚ್ಚನ ಅಭಿಮಾನಿಗಳು ಸಹಾಯ ಮಾಡಿದ್ದಾರೆ. ಗಣೇಶ್ ಮೂಲತಃ ಹಾಸನದವನಾಗಿದ್ದು, ಬಾಲ್ಯದಲ್ಲಿಯೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದನು. ಬಳಿಕ ಪೋಷಕರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದನು.
ಸುಮಾರು 10 ವರ್ಷದಿಂದ ಗಣೇಶ್ ಅನಾಥನಾಗಿ ಭಿಕ್ಷೆ ಬೇಡುತ್ತಾ ಹಾಸನ ನಗರದಲ್ಲಿ ಸುತ್ತಾಡಿಕೊಂಡಿದ್ದನು. ಒಂದು ದಿನ ಈ ಯುವಕನನ್ನು ಸುದೀಪ್ ಅಭಿಮಾನಿಗಳ ಸಂಘದವರು ನೋಡಿದ್ದಾರೆ. ಬಳಿಕ ಅವರು ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ಯುವಕ ಗುಣಮುಖನಾಗಿದ್ದಾನೆ.
ಯುವಕನ ಜೀವನಕ್ಕಾಗಿ ಒಂದು ಕೆಲಸ ಕೊಡಿಸಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದರಂತೆಯೇ ಸಂಘದಲ್ಲಿದ್ದ ಒಬ್ಬ ಅಭಿಮಾನಿಯ ಬಾವ ಮಂಗಳೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಅಲ್ಲಿಯೇ ಗಣೇಶ್ ಗೆ ಕೆಲಸವನ್ನು ಕೊಡಿಸಿದ್ದಾರೆ. ತಮ್ಮ ಅಭಿಮಾನಿಗಳ ಕಾರ್ಯವನ್ನು ಸುದೀಪ್ ಅವರು ಟ್ವೀಟ್ ಮಾಡಿ ಶ್ಲಾಫಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews