ಕನ್ನಡ ಮಾತನಾಡಿ ಎಂದಿದ್ದಕ್ಕೆ ನಟ ಸಲ್ಮಾನ್ ಆಕ್ರೋಶ

Public TV
2 Min Read
SALMAN

ಬಾಲಿವುಡ್ (Bollywood) ನಟ ಕಮ್ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಇದೀಗ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ (Kannada) ಮಾತನಾಡಿ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿ ನಿಂದಿಸಿದ್ದಾರೆ. ತನಗೆ ಅವಮಾನ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡುವ ಮೂಲಕ ಕರ್ನಾಟಕ ಮೂಲದ ನಟ ಆರೋಪಿಸಿದ್ದಾರೆ. ಇದನ್ನೂ ಓದಿ: ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ

ಕೆಲಸದ ನಿಮಿತ್ತ ದುಬೈಗೆ ಹೋಗಲು ಸಲ್ಮಾನ್ ಲೇಟ್ ನೈಟ್ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಡ್ಯಾನ್ಸರ್ ಸಲ್ಮಾನ್ ಅವರ ಭದ್ರತಾ ತಪಾಸಣೆ ಮಾಡಿಸುತ್ತಿದ್ದಾಗ ಅವರ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ನಟ ನನಗೆ ಕನ್ನಡ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಿ ಕನ್ನಡದಲ್ಲಿ ಮಾತನಾಡುವಂತೆ ನನ್ನನ್ನು ಬಲವಂತಪಡಿಸಿದರು. ಈ ಅಧಿಕಾರಿ ಅನಕ್ಷರಸ್ಥ. ಇಂಥ ಅನಕ್ಷರಸ್ಥರಿಂದಲೇ ದೇಶ ಅಭಿವೃದ್ಧಿ ಆಗುತ್ತಿಲ್ಲ ಎಂದು ಸಲ್ಮಾನ್ ನಿಂದಿಸಿದ್ದಾರೆ.

SALMAN

ಸೆಲ್ಫಿ ವಿಡಿಯೋವನ್ನು ಮೂಲಕ ನಡೆದ ಘಟನೆಯನ್ನು ನಟ ವಿವರವಾಗಿ ತಿಳಿಸಿದ್ದಾರೆ. ಹುಟ್ಟಿರೋದು ಬೆಂಗಳೂರಿನಲ್ಲಿ. ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ. ಆದರೂ, ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್ ಅವರು ಉತ್ತರಿಸಿ ನಾನು ಸೌದಿ ಹುಡುಗ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ಮಾತ್ರ ಆದರೆ ಕಲಿತಿದ್ದು ಸೌದಿನಲ್ಲಿ. ಹಾಗಾಗಿ, ನಾನು ಕನ್ನಡ ಕಲಿತಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇ ಬೇಕು ಎಂಬ ನಿಯಮ ಇದೆಯೇ. ನಾನು ಬೆಂಗಳೂರಿನವನೇ. ಆದರೆ, ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗಿದೆ. ಈ ರೀತಿಯ ಅನಕ್ಷರಸ್ಥ ಜನರು ಇರುವವವರೆಗೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನನ್ನದೇ ನಗರದಲ್ಲಿ ನಾನು ಯಾರೆಂದು ಪ್ರೂವ್ ಮಾಡಬೇಕಿದೆ ಎಂದು ನಟ ವೀಡಿಯೋದಲ್ಲಿ ಕಿಡಿಕಾರಿದ್ದಾರೆ.

ಬೆಂಗಳೂರಿಗಾಗಿ ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಆದರೆ, ಈಗ ನಾನು ಭಾರತೀಯ ಎಂಬುದನ್ನು ನಾನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಮಾತೃಭಾಷೆ ಹಿಂದಿ. ಆ ಭಾಷೆ ನನಗೆ ಬರುತ್ತದೆ. ಅದು ಸಾಕಲ್ಲವೆ ಎಂದು ಸಲ್ಮಾನ್ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಮೋದಿಜೀ ಅವರಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತದೆಯೇ. ಈ ಅನಕ್ಷರಸ್ಥರಿಗೆ ಏನು ಹೇಳುವುದು. ಆ ಅಧಿಕಾರಿ ವಿರುದ್ಧ ದೂರು ನೀಡಲು ಪ್ರಯತ್ನಿಸಿದೆ. ಆದರೆ ಇಲ್ಲಿ ಯಾರೂ ನನಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ನಟ ಸಲ್ಮಾನ್ ಹೇಳಿದ್ದಾರೆ. ಈ ವೀಡಿಯೋ ಇದೀಗ ಸಾಕಷ್ಟು ಜನರ ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *