ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ನೂರಾರು ಸಲ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಡಿವೆ. ನಿರೂಪಕಿ ಅನುಶ್ರೀ ಅವರ ಜೊತೆ ಮದುವೆಯಾಗಿದ್ದಾರೆ ಎನ್ನುವುದರಿಂದ ಹಿಡಿದು, ನಾನಾ ನಟಿಯರ ಹೆಸರು ಅವರ ಮದುವೆಯ ಯಾದಿಯಲ್ಲಿ ಕಾಣಿಸಿಕೊಂಡಿವೆ. ಅವೆಲ್ಲವೂ ಈವರೆಗೂ ಸುಳ್ಳಾಗಿದ್ದವು. ಈ ಬಾರಿ ನಿಜ ಸಂಗತಿಯೊಂದು ತೇಲಿ ಬಂದಿದೆ. ಮುಂದಿನ ವರ್ಷ ಪಕ್ಕಾ ಚಿಕ್ಕಣ್ಣ ಮದುವೆಯಾಗಲಿದ್ದಾರಂತೆ. ಅದಕ್ಕೆ ಕಾರಣ ಅವರ ಕುಟುಂಬದ ಒತ್ತಡ.
ಸದ್ಯ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಅವರು, ಎರಡನೇ ಹಂತದ ಶೂಟಿಂಗ್ ಗಾಗಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಅವರು ಹಸೆಮಣೆ ಏರಲಿದ್ದಾರಂತೆ. ಈ ಸಲ ಮಾತ್ರ ಮದುವೆ ವಿಚಾರ ಯಾವುದೇ ಕಾರಣಕ್ಕೂ ಗಾಸಿಪ್ ಆಗಲ್ಲ ಎಂದು ನಿಜ ನುಡಿದಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
ಚಿಕ್ಕಣ್ಣ ಮದುವೆ ಆಗುತ್ತಿರುವ ಹುಡುಗಿ ಯಾರು? ಸಿನಿಮಾ ರಂಗದಲ್ಲೇ ಇದ್ದಾರಾ ಅಥವಾ ಕುಟುಂಬದವರು ಹುಡುಗಿಯನ್ನು ಹುಡುಕಿದ್ದಾರೆ? ಈ ಕುರಿತು ಅವರು ಏನನ್ನೂ ಹೇಳಿಲ್ಲ. ಆದರೆ, ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಮದುವೆ ಪಕ್ಕಾ ಎಂದು ಮಾತ್ರ ಹೇಳಿಕೊಂಡಿದ್ದಾರೆ. ಹಲವು ದಿನಗಳಿಂದ ಚಿಕ್ಕಣ್ಣ ಮದುವೆ ವಿಚಾರ ಓಡಾಡುತ್ತಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡಲು ಅವರು ನಿರ್ಧಾರ ಮಾಡಿದ್ದಾರೆ.