ಮಣಿಪುರದ ಹಿಂಸಾಚಾರ ಪರಿಸ್ಥಿತಿ ಬಳಸಿಕೊಂಡು ಭಯೋತ್ಪಾದನೆ ಹರಡಲು ಯತ್ನ – ಆರೋಪಿ ಅರೆಸ್ಟ್

Public TV
1 Min Read
Accused Arrested In Transnational Terror Case From Imphal Airport He Met Kuki Insurgents In Myanmar NIA

ಇಂಫಾಲ್: ಮಣಿಪುರದ (Manipur) ಹಿಂಸಾಚಾರ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಭಯೋತ್ಪಾದನೆಯನ್ನು ಹರಡಲು ಯತ್ನಿಸಿದ ಆರೋಪದ ಮೇಲೆ ಎನ್‍ಐಎ (NIA) ಪ್ರಮುಖ ಆರೋಪಿಯನ್ನು ಇಂಫಾಲ್ ವಿಮಾನ ನಿಲ್ದಾಣದಲ್ಲಿ (Imphal Airport) ಬಂಧಿಸಿದೆ.

ಬಂಧಿತ ಆರೋಪಿಯನ್ನು ಕುಕಿ ನ್ಯಾಷನಲ್ ಫ್ರಂಟ್-ಮಿಲಿಟರಿ ಕೌನ್ಸಿಲ್ (ಕೆಎನ್‍ಎಫ್-ಎಂಸಿ) ಸದಸ್ಯ ಥೋಂಗ್‍ಮಿಂಥಾಂಗ್ ಹಾಕಿಪ್ ಅಲಿಯಾಸ್ ರೋಜರ್ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅಲ್ಲದೇ ಆತನ ವಿರುದ್ಧ ಕಳೆದ ವರ್ಷ ಜುಲೈ 19 ರಂದು ಎನ್‍ಐಎ ಸುಮೋಟೋ ಪ್ರಕರಣ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು 

ಮ್ಯಾನ್ಮಾರ್ (Myanmar) ಮೂಲದ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಕುಕಿ ಮತ್ತು ಝೋಮಿ ದಂಗೆಕೋರರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಸಂಚು ರೂಪಿಸಿದ್ದರು. ಈ ಪ್ರದೇಶದಲ್ಲಿನ ಪ್ರಸ್ತುತ ಜನಾಂಗೀಯ ಅಶಾಂತಿಯನ್ನು ಬಳಸಿಕೊಂಡು ಈ ಕೃತ್ಯ ಎಸಗಲು ಮುಂದಾಗಿದ್ದರು. ಅಲ್ಲದೇ ಬಂಧಿತ ಆರೋಪಿ ಹಿಂಸಾಚಾರದ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ರಾಜ್ಯದಲ್ಲಿನ ಅಸ್ಥಿರ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಮತ್ತು ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕಲು ಆರೋಪಿ ಮ್ಯಾನ್ಮಾರ್‌ನ ಕುಕಿ ನ್ಯಾಷನಲ್ ಫ್ರಂಟ್-ಬರ್ಮಾ (ಕೆಎನ್‍ಎಫ್-ಬಿ) ದಂಗೆಕೋರ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದ. ಹಿಂಸಾಚಾರದಲ್ಲಿ ಬಳಸಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೂರೈಸಲು ಆರೋಪಿಗಳು ಕೆಎನ್‍ಎಫ್-ಬಿ ನಾಯಕರನ್ನು ಭೇಟಿಯಾಗಿದ್ದ ಎಂದು ಎನ್‍ಐಎ ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿ ಭದ್ರತಾ ಪಡೆಗಳ ವಿರುದ್ಧ ಹಲವಾರು ಸಶಸ್ತ್ರ ದಾಳಿಗಳಲ್ಲಿ ಭಾಗವಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿಗೆ ಕರೆದು ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

Share This Article