ನವದೆಹಲಿ: ಚುನಾವಣಾ ಅಕ್ರಮಗಳ ಆರೋಪದ ಸಂಬಂಧ ನಡೆಯುತ್ತಿರುವ ಪ್ರತಿಭಟನೆಗೆ ಮುಂದಾಗಿ ಬಂಧನಕ್ಕೊಳಗಾಗಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಅವರನ್ನು ಬಿಡುಗಡೆ ಮಾಡಲಾಗಿದೆ.
ದೀಪ್ಕೆ ಅವರನ್ನು, ದೆಹಲಿ ನ್ಯಾಯಾಲಯವು ಶನಿವಾರ ಷರತ್ತುಬದ್ಧವಾಗಿ ಬಿಡುಗಡೆ ಮಾಡಲು ಆದೇಶಿಸಿದೆ. ಅವರು 50,000 ರೂಪಾಯಿಗಳ ಬಾಂಡ್ ಒದಗಿಸಬೇಕು. ಶಾಂತಿಗೆ ಭಂಗ ತರುವುದಿಲ್ಲ ಎಂದು ಮುಚ್ಚಳಿಕೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: ಕಾಂಗ್ರೆಸ್, ʻಜಿರಳೆʼ ಪ್ರತಿಭಟನೆಯಿಂದ ವ್ಯಾಪಾರಕ್ಕೆ 3,000 ಕೋಟಿ ನಷ್ಟ! – CTI ವರದಿಯಲ್ಲೇನಿದೆ?
ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆ ನಡೆದ ಸ್ವಲ್ಪ ಸಮಯದ ನಂತರ, ದೀಪ್ಕೆ ಮಂದಿರ ಮಾರ್ಗ ಪೊಲೀಸ್ ಠಾಣೆಯಿಂದ ಹೊರಬಂದರು. ಸಿಜೆಪಿ ಸಂಸ್ಥಾಪಕನ ಜೊತೆಗೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಕೂಡ ಶುಕ್ರವಾರ ವಶಕ್ಕೆ ಪಡೆದು, ಶನಿವಾರ ಮುಂಜಾನೆ ರಿಲೀಸ್ ಮಾಡಲಾಯಿತು. ಆದರೆ, ದೀಪ್ಕೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (Special Executive Magistrate) ಅವರ ಮುಂದೆ ಹಾಜರುಪಡಿಸಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ನಿಗದಿಪಡಿಸಲಾಗಿದ್ದ ಸ್ಥಳದ ಮಾನ್ಯತೆಯನ್ನು ಕಳೆದ ವಾರ ರದ್ದುಗೊಳಿಸಲಾಗಿದ್ದರೂ, ಅಲ್ಲಿಗೆ ಪ್ರವೇಶಿಸಿದ ಆರೋಪದ ಮೇಲೆ ಸಿಜೆಪಿ (CJP) ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ಕಾರಣವಿಲ್ಲದೇ ಮಹಿಳೆಯನ್ನ ರಾತ್ರಿಯಿಡೀ ಕಸ್ಟಡಿಯಲ್ಲಿಡಲು ಯಾವ ಅಧಿಕಾರವಿದೆ? – ಬಿಡುಗಡೆ ಬಳಿಕ ನೇಹಾ ಬೋರಾ ಪ್ರಶ್ನೆ
ಶುಕ್ರವಾರ ಸಂಜೆ ಕನ್ನಾಟ್ ಪ್ಲೇಸ್ನಲ್ಲಿ ರಾಷ್ಟ್ರಧ್ವಜವನ್ನು (ತ್ರಿವರ್ಣ ಧ್ವಜ) ಹಾರಿಸುವ ಉದ್ದೇಶದಿಂದ ‘ಲೆಹ್ರಾ ದೋ ತಿರಂಗಾ’ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಗೂ ಮುನ್ನವೇ ನೇಹಾ ಬೋರಾ ಮತ್ತು ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದರು. ಆದಾಗ್ಯೂ, ವಿದ್ಯಾರ್ಥಿಗಳು ಮತ್ತು ಇತರರು ಧ್ವಜವನ್ನು ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.
